ADVERTISEMENT

ಅತ್ಯಾಚಾರ: 28 ವಾರಗಳ ಭ್ರೂಣ ತೆಗೆಯಲು ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 15:35 IST
Last Updated 31 ಜನವರಿ 2025, 15:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿರುವ 16 ವರ್ಷದ ಬಾಲಕಿಯ 28 ವಾರಗಳ ಭ್ರೂಣವನ್ನು ತೆಗೆಯಲು ವಾಣಿ ವಿಲಾಸ ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶಿಸಿದೆ.

ಸಂತ್ರಸ್ತ ಬಾಲಕಿಯ ಪರವಾಗಿ ಆಕೆಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಬಾಲಕಿಯ ವೈದ್ಯಕೀಯ ಗರ್ಭಪಾತದ ವೆಚ್ಚವನ್ನು ಆಸ್ಪತ್ರೆಯೇ ಭರಿಸಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.

‘ಭ್ರೂಣವನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲು ಅನುಕೂಲವಾಗುವಂತೆ ಸಂರಕ್ಷಿಸಬೇಕು. ಅಂಗಾಂಶ ಮಾದರಿಯನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು. ಸಂತ್ರಸ್ತೆಗೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರಲು ವಾಹನ ವ್ಯವಸ್ಥೆ ಮಾಡಬೇಕು’ ಎಂದು ಬಾಲಕಿ ವಾಸವಿರುವ ಸ್ಥಳೀಯ ಠಾಣೆಯ ಪೊಲೀಸರಿಗೆ ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

‘ಗರ್ಭಪಾತ ಪ್ರಕ್ರಿಯೆಗೆ ಅರ್ಜಿದಾರರು ಅಥವಾ ಅವರ ಕುಟುಂಬದವರಿಂದ ಯಾವುದೇ ವೆಚ್ಚವನ್ನು ಪಡೆದುಕೊಳ್ಳಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಪಾಲಿಸಿದ ಬಗ್ಗೆ ಎರಡು ವಾರಗಳಲ್ಲಿ ವರದಿ ನೀಡಿ’ ಎಂದೂ ಪೊಲೀಸರು ಮತ್ತು ವಾಣಿ ವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.