ADVERTISEMENT

ತಾಂತ್ರಿಕ ಶಿಕ್ಷಣಕ್ಕೆ ₹2,600 ಕೋಟಿ ಸಾಲ: ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:09 IST
Last Updated 2 ಜೂನ್ 2025, 15:09 IST
ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಿಡುಗಡೆ ಮಾಡಿದರು.
ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಿಡುಗಡೆ ಮಾಡಿದರು.   

ಬೆಂಗಳೂರು: ಏಷ್ಯಾ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ₹2,600 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಕರ್ನಾಟಕದ ತಾಂತ್ರಿಕ ಶಿಕ್ಷಣವನ್ನು ಬಲಗೊಳಿಸಲು ನೆರವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಹೇಳಿದರು.

ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆ ಬಿಡುಗಡೆ ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ನಿರ್ವಹಣೆ ಇಲಾಖೆಯ ಸಮ್ಮತಿಯೂ ಸಿಕ್ಕಿದೆ. ಬ್ಯಾಂಕ್‌ ಅಧಿಕಾರಿಗಳು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಸಾಲದ ಕಂತುಗಳು ಬಿಡುಗಡೆಯಾಗಲಿವೆ. ಈ ಹಣವನ್ನು ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ಸುಧಾರಣೆಗೆ ಬಳಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಉನ್ನತ ಶಿಕ್ಷಣ ಇಲಾಖೆಯ ಆದೇಶಗಳು, ಸೂಚನೆಗಳು, ನಿಯಮಗಳನ್ನು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸಲು ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆ ಸಹಕಾರಿಯಾಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಮಾಹಿತಿ ನೀಡಲೆಂದೇ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಈ ಪತ್ರಿಕೆ ರೂಪಿಸಿದೆ. ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ, ತಂತ್ರಜ್ಞಾನ ಬಳಕೆ ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿನ ಜಾಗತಿಕ ನಡೆಯನ್ನೂ ಪತ್ರಿಕೆ ಒಳಗೊಂಡಿರುತ್ತದೆ. ಹೆಸರಾಂತ ಶಿಕ್ಷಣ ತಜ್ಞರು, ಸಂಶೋಧಕರು ಪತ್ರಿಕೆಗೆ ಬರೆಯಲಿದ್ದಾರೆ ಎಂದರು. 

ADVERTISEMENT

ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿ ನೀಡುವುದು ಸರ್ಕಾರದ ಆಶಯ. ಕಲಿಕೆಯ ಸಮಯದಲ್ಲೇ ಕೈಗಾರಿಕೆಗೆ ಪೂರಕ ಹಾಗೂ ಉದ್ಯೋಗ ಖಚಿತತೆಯ ಕೌಶಲಾಧಾರಿತ ಶಿಕ್ಷಣವನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಮಾಡಿದರು. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಜಿ. ಜಗದೀಶ್, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ, ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಎಸ್.ಆರ್. ನಿರಂಜನ್, ಕಾರ್ಯಕಾರಿ ನಿರ್ವಾಹಕ ಕೆ.ಜಿ. ಚಂದ್ರಶೇಖರ್‌ ಉಪಸ್ಥಿತರಿದ್ದರು.

ಮೇ 31ಕ್ಕೆ ರಾಜ್ಯ ಶಿಕ್ಷಣ ನೀತಿ ಆಯೋಗದ ಅವಧಿ ಮುಕ್ತಾಯವಾಗಿದ್ದು ವಿಸ್ತರಣೆ ಮಾಡಿಲ್ಲ. ಆಯೋಗ ಜೂನ್‌ ಎರಡನೇ ವಾರದಲ್ಲಿ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಿದೆ
ಡಾ.ಎಂ.ಸಿ. ಸುಧಾಕರ್‌ ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.