ADVERTISEMENT

ಹಿಜಾಬ್: ವಿಸ್ತೃತ ನ್ಯಾಯಪೀಠಕ್ಕೆ ಅರ್ಜಿ ವರ್ಗಾಯಿಸಿ ಆದೇಶ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 10:41 IST
Last Updated 9 ಫೆಬ್ರುವರಿ 2022, 10:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಹಿಜಾಬ್‌ಗೆಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ನ್ಯಾಯಪೀಠಕ್ಕೆ ಒಪ್ಪಿಸಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಆದೇಶಿಸಿದ್ದಾರೆ.

ಈ ಕುರಿತಂತೆ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳನ್ನು ಮಧ್ಯಾಹ್ನದ ಕಲಾಪದಲ್ಲಿ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, "ಈ ಪ್ರಕರಣವು ಹಲವು ಸಾಂವಿಧಾನಿಕ ಅಂಶಗಳನ್ನು ಒಳಗೊಂಡಿರುವ ಕಾರಣ ಇವುಗಳ ವಿಚಾರಣೆ ವಿಸ್ತೃತ ನ್ಯಾಯಪೀಠದಲ್ಲೇ ನಡೆಯುವುದು ಒಳಿತು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತೆಯೇ, ಈ ಕುರಿತು ಅರ್ಜಿದಾರರ ಪರ ವಕೀಲರು ಮತ್ತು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅವರು ತಮ್ಮ ಅಭಿಪ್ರಾಯ ವಿವರಿಸುವಂತೆಯೂ ನ್ಯಾಯಮೂರ್ತಿಗಳು ಕೋರಿದರು.

ADVERTISEMENT

ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ಸಮ್ಮತಿ ಸೂಚಿಸಿದರು.

ಏತನ್ಮಧ್ಯೆ ಅರ್ಜಿದಾರರ ಪರ ಮತ್ತೊಬ್ಬ ವಕೀಲ ಮೊಹಮದ್ ತಾಹಿರ್, "ಹಿಜಾಬ್ ವಿಷಯವಾಗಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆ. ಶಾಲೆ ಕಾಲೇಜುಗಳ ಪಾಠ ಪ್ರವಚನ ಸ್ಥಗಿತಗೊಂಡಿದೆ. ಇನ್ನೆರಡು ತಿಂಗಳಿಗೆ ಶೈಕ್ಷಣಿಕ ವರ್ಷ ಮುಕ್ತಾಯ ವಾಗಲಿದೆ. ಈ ಹಂತದಲ್ಲಿ ಅವರು ತೊಂದರೆಗೆ ಒಳಗಾದರೆ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ಇದೇ ನ್ಯಾಯಪೀಠ ಮಧ್ಯಂತರ ಪರಿಹಾರ ನೀಡಿ ಆದೇಶಿಸಬೇಕು" ಎಂದು ಕೋರಿದರು.

ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, "ಸರ್ಕಾರದ ಆದೇಶದಲ್ಲಿ ಯಾವುದೇ ಕಾನೂನು ಬಾಹಿರ ಸಂಗತಿಗಳಿಲ್ಲ. ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಆಯಾ ಕಾಲೇಜು ಆಡಳಿತ ಮಂಡಳಿಗಳು ತಮ್ಮ ನಿರ್ಧಾರ ಕೈಗೊಳ್ಳುತ್ತವೆ" ಎಂದರು.

ಇದೇ ವೇಳೆ ಹಲವು ಮಧ್ಯಂತರ ಅರ್ಜಿದಾರರ ಪರ ವಕೀಲರ ವಾದವನ್ನೂ ಆಲಿಸಿದ ನ್ಯಾಯಪೀಠ ಅಂತಿಮವಾಗಿ, "ಎಲ್ಲ ಅರ್ಜಿಗಳೂ ವಿಸ್ತೃತ ನ್ಯಾಯಪೀಠದಲ್ಲೇ ವಿಚಾರಣೆ ನಡೆಯುವುದು ಸೂಕ್ತ" ಎಂದು ಆದೇಶಿಸಿತು.

"ಈ ಅರ್ಜಿಗಳ ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿಗಳು ತಮ್ಮ ವಿವೇಚನೆಯ ಅನುಸಾರ ಕ್ರಮ ಕೈಗೊಳ್ಳಲಿದ್ದಾರೆ" ಎಂದು ನ್ಯಾಯಮೂರ್ತಿಗಳು ಆದೇಶಿಸಿದರು.

"ಮುಖ್ಯ ನ್ಯಾಯಮೂರ್ತಿಗಳಟೇಬಲ್ ಮುಂದೆ ಇವತ್ತೇ ಈ ಪ್ರಕರಣದ ದಸ್ತಾವೇಜನ್ನು ಇರಿಸಿ" ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ನ್ಯಾಯಪೀಠ ಆದೇಶಿಸಿ ವಿಚಾರಣೆಯನ್ನು ಬರ್ಖಾಸ್ತುಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.