ADVERTISEMENT

ನೀವು ಬುರ್ಖಾ ಧರಿಸಲು ಅವಕಾಶ ನೀಡುವಿರಾ: ಎಂ.ಬಿ.ಪಾಟೀಲ್‌ಗೆ ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2022, 11:29 IST
Last Updated 7 ಫೆಬ್ರುವರಿ 2022, 11:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಿಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಧರಿಸಲು ಅವಕಾಶ ನೀಡುತ್ತೀರಾ ಎಂಬುದನ್ನು ಮೊದಲು ತಿಳಿಸಿ’ ಎಂದು ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್‌ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.

ಸರ್ಕಾರವೇ ಹಿಜಾಬ್ ಪ್ರಕರಣ ಸೃಷ್ಟಿಸಿದೆ ಎಂಬ ಎಂ.ಬಿ.ಪಾಟೀಲ್‌ ಆರೋಪಕ್ಕೆ ಬಿಜೆಪಿಯು ಟ್ವೀಟ್ ಮೂಲಕ ತಿರುಗೇಟು ನೀಡಿದೆ.

‘ಎಂ.ಬಿ.ಪಾಟೀಲರೇ, ನೀವು ಪ್ರಚಾರ ಸಮಿತಿ ಅಧ್ಯಕ್ಷರಾದ ಕಾರಣಕ್ಕೆ ಪ್ರಚಾರದಲ್ಲಿರಲೇಬೇಕು ಎನ್ನುವ ಕಾರಣಕ್ಕೆ ಭಾಷಣದ ಸರಕು ಹುಡುಕಬೇಡಿ. ಸಮವಸ್ತ್ರ ಸಂಹಿತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಕ್ಕೆ ಮುನ್ನ ನಿಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಧರಿಸಲು ಅವಕಾಶ ನೀಡುತ್ತೀರಾ ಎಂಬುದನ್ನು ಮೊದಲು ತಿಳಿಸಿ’ ಎಂದು #CongressVoteBankPolitics ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.

ADVERTISEMENT

‘ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. ಎಂ.ಬಿ. ಪಾಟೀಲರೇ, ನಿಮ್ಮ ರಾಜಕೀಯ ಪ್ರೇರಿತ ಹೇಳಿಕೆಯನ್ನು ಬದಿಗಿರಿಸಿ. ಗೋವಾದ ಕಾಂಗ್ರೆಸ್ ಮುಖಂಡರಿಂದ ಈ ಹೇಳಿಕೆ ಕೊಡಿಸಲು ನಿಮಗೆ ಸಾಧ್ಯವೇ’ ಎಂದೂ ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.