ADVERTISEMENT

ಹಿಜಾಬ್‌ ತೀರ್ಪು ಇಂದು; ರಾಜ್ಯದ ಹಲವೆಡೆ ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 20:31 IST
Last Updated 14 ಮಾರ್ಚ್ 2022, 20:31 IST
   

ಬೆಂಗಳೂರು:ಹಿಜಾಬ್‌ ನಿರ್ಬಂಧ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಲಾಗಿರುವ ತೀರ್ಪನ್ನು ಹೈಕೋರ್ಟ್‌, ಮಂಗಳವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕಲಬುರಗಿ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ- ಕಾಲೇಜು ಆಡಳಿತ ಮಂಡಳಿಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠ ಫೆ.25ಕ್ಕೆ ವಿಚಾರಣೆ ಮುಗಿಸಿ, ತೀರ್ಪು ಕಾಯ್ದಿರಿಸಿತ್ತು.

ತೀರ್ಪು ಪ್ರಕಟಣೆಗೆ ಸಮಯ ನಿಗದಿ ಮಾಡುತ್ತಿದ್ದಂತೆ ಬೆಂಗಳೂರು ನಗರ ಹಾಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಂಭ್ರಮಾಚರಣೆ ನಿರ್ಬಂಧಿಸಲಾಗಿದೆ. ಪಟಾಕಿಗಳನ್ನು ಸುಡುವುದು, ಸರ್ಕಾರಿ ಬಸ್ ಅಥವಾ ಇತರ ವಾಹನಗಳಿಗೆ ಅಡೆತಡೆ ಉಂಟು ಮಾಡುವುದನ್ನು ಪ್ರತಿಬಂಧಿಸಲಾಗಿದೆ.

ADVERTISEMENT

ಶಿವಮೊಗ್ಗ, ಬೆಂಗಳೂರಿನಲ್ಲಿ ಇದೇ 21ರವರೆಗೆ, ಮೈಸೂರಿನಲ್ಲಿ 20ರವರೆಗೆ, ಕಲಬುರಗಿ, ದಾವಣಗೆರೆಯಲ್ಲಿ 19ರವರೆಗೆ, ಕೊಡಗಿನಲ್ಲಿ 18ರವರೆಗೆ, ಚಿತ್ರದುರ್ಗದಲ್ಲಿ 16ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ. ಚಾಮರಾಜನಗರ, ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಜಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.