ADVERTISEMENT

ಹಿಜಾಬ್‌:ಪಿಐಎಲ್‌ ವಜಾ, ಹೈಕೋರ್ಟ್‌ನಲ್ಲಿ ಮುಂದುವರಿದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 18:31 IST
Last Updated 17 ಫೆಬ್ರುವರಿ 2022, 18:31 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಕಲಂ 133 (2)ರ ಅನುಸಾರ ರಾಜ್ಯದ ಎಲ್ಲ ಸರ್ಕಾರಿ ಶಾಲೆ
ಗಳಲ್ಲಿ ನಿಗದಿಪಡಿಸಲಾದ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದು ಮತ್ತು ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿ ನಿರ್ಧರಿಸುವಂತಹ ಸಮವಸ್ತ್ರನ್ನೇ ಧರಿಸತಕ್ಕದ್ದು’ ಎಂದು ಹಿಜಾಬ್‌ ನಿಷೇಧಿಸಿರುವ ಆದೇಶ ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.

ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜುಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಗುರುವಾರ ಮುಂದುವರಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್, ‘ಸರ್ಕಾರದ ಈ ಕ್ರಮವು ಅಂತರಾಷ್ಟ್ರೀಯ ಒಪ್ಪಂದಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಧಾರ್ಮಿಕವಾದ ಅಗತ್ಯ ಆಚರಣೆಗಳಿಗೆ ಸರ್ಕಾರ ಅಡ್ಡಿಯುಂಟು ಮಾಡುವಂತಿಲ್ಲ ಮತ್ತು ಈ ಕುರಿತಂತೆ ಅಂತರರಾಷ್ಟ್ರೀಯ ಒಡಂಬಡಿಕೆಗಳನ್ನು ವಿಚಾರಣೆ ವೇಳೆ ನ್ಯಾಯಪೀಠ ಮನಗಾಣುವ ಅವಶ್ಯಕತೆ ಇದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಅರ್ಜಿದಾರರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ದೋಷವಿದೆ. ಆದ್ದರಿಂದ, ನಿಮ್ಮ ಅರ್ಜಿ ವಜಾ ಮಾಡಲಾಗುವುದು‘ ಎಂದು ಹೇಳಿತು. ಇದಕ್ಕೆ ಕೊತ್ವಾಲ್‌, ‘ಇದು ನ್ಯಾಯ ಸಮ್ಮತವಲ್ಲ. ಅರ್ಜಿ ಆಲಿಸಲು ನ್ಯಾಯಪೀಠ ಅವಕಾಶ ನೀಡಬೇಕು. ಅರ್ಜಿದಾರರು ಸಾಮಾ
ಜಿಕ ಹಾಗೂ ಆರ್‌ಟಿಐ ಕಾರ್ಯಕರ್ತ. ಕೋವಿಡ್ ಸೇರಿದಂತೆ ಹಲವು ವಿಚಾರಗಳಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಇದೆ. ಆದ್ದರಿಂದ, ನಮ್ಮ ವಾದವನ್ನು ಆಲಿಸಬೇಕು’ ಎಂದು ಕೋರಿದರು. ಆದರೆ, ಇದನ್ನು ಮಾನ್ಯ ಮಾಡದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ವಿಚಾರಣೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದ್ದು, ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಲಿದ್ದಾರೆ.

ಮತ್ತೊಂದು ಅರ್ಜಿ: ‘ರಾಜ್ಯ ಸರ್ಕಾರ ಇದೇ 5ರಂದು ಹೊರಡಿಸಿರುವ ಆದೇಶವನ್ನು ರಾಜ್ಯದ ಅನುದಾನರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸದಂತೆ ತಡೆ ನೀಡಬೇಕು’ ಎಂದು ವಕೀಲ ಜಿ.ಆರ್.ಮೋಹನ್‌ ಮನವಿ ಮಾಡಿದರು. ‘ಒಕ್ಕೂಟದಲ್ಲಿ ರಾಜ್ಯ ಪಠ್ಯಕ್ರಮ, ಐಸಿಎಸ್‌ಸಿ, ಸಿಬಿಎಸ್‌ಸಿ ಪಠ್ಯಕ್ರಮಗಳಿಗೆ ಸೇರಿದ ಸಂಸ್ಥೆಗಳೂ ಸದಸ್ಯತ್ವ ಪಡೆದಿವೆ’ ಎಂದು ತಿಳಿಸಿದರು.

ಈ ಕುರಿತಂತೆ ‘ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟ’ದ (ರಿ) ಅಧ್ಯಕ್ಷ ಸಿ.ಆರ್‌.ಮೊಹಮದ್‌ ಇಮ್ತಿಯಾಜ್‌ ಪರ ಹಾಜರಾಗಿದ್ದ ಮೋಹನ್‌, ‘ಇವತ್ತಷ್ಟೇ ಅರ್ಜಿ ಸಲ್ಲಿಸಲಾಗಿದೆ’ ಎಂದು ಪೀಠಕ್ಕೆ ತಿಳಿಸಿದರು. ಈ ಅರ್ಜಿ ಶುಕ್ರವಾರ ವಿಚಾರಣೆಗೆ ಬರುವ ನಿರೀಕ್ಷೆ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.