ADVERTISEMENT

ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂದು ಹಿಂದಿ ಪದ: ವಿರೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2023, 14:45 IST
Last Updated 6 ಮಾರ್ಚ್ 2023, 14:45 IST
ನಂದಿನಿ ಮೊಸರಿನ ಪ್ಯಾಕೆಟ್
ನಂದಿನಿ ಮೊಸರಿನ ಪ್ಯಾಕೆಟ್    

ಬೆಂಗಳೂರು: ಇತ್ತೀಚೆಗೆ ಗುಜರಾತ್‌ನ ಅಮುಲ್ ಕಂಪನಿಯಲ್ಲಿ ಕರ್ನಾಟಕದ ಕೆಎಂಎಫ್ ಅನ್ನು ವಿಲೀನ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿ ಇದಕ್ಕೆ ಸಾಕಷ್ಟು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ನಂದಿನಿ ಪ್ರೋಬಯೊಟಿಕ್ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂಬ ಹಿಂದಿ ಪದವನ್ನು ಇಂಗ್ಲಿಷ್ ಅಕ್ಷರದಲ್ಲಿ ಬರೆದಿರುವುದು ಕನ್ನಡಪರ ಹೋರಾಟಗಾರರ ಕೆಂಗೆಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಮೊಸರಿನ ಪ್ಯಾಕೆಟ್‌ ಚಿತ್ರವನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ಹಾಗೂ ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ರೂಪೇಶ್ ರಾಜಣ್ಣ ಹಿಂದಿ ಹೇರಿಕೆ ವಿರುದ್ಧ ಕಿಡಿ ಕಾರಿದ್ದಾರೆ.

ADVERTISEMENT

‘ಕನ್ನಡಿಗರೇ ಗುಲಾಮಗಿರಿ ಮಾಡೋರನ್ನ ಪಕ್ಕಕ್ಕಿಟ್ಟು ನಾವಾದ್ರೂ ಎಚ್ಚರವಾಗಬೇಕಿದೆ. ನಂದಿನಿಯನ್ನು ಹೇಗಾದ್ರು ಮಾಡಿ ಅಮುಲ್ ಜೊತೆ ಸೇರಿಸೋಕೆ ನೋಡಿದ್ರು ಆಗ್ಲಿಲ್ಲ. ಈಗ ಹೇಗಾದ್ರು ಮಾಡಿ ಹಿಂದಿನಾದ್ರು ಸೇರಿಸಿಬಿಡೋಣ ಅಂತ ನಂದಿನಿ ಮೇಲೆ ಎಂದೂ ಇಲ್ಲದ ಹಿಂದಿ ಈಗ ಬಂದಿದೆ. ಇಂದು ಎಚ್ಚೆತ್ತುಕೊಳ್ಳದಿದ್ರೆ ಒಂದಿನ ಕನ್ನಡ ಹೋಗಿ ಅಲ್ಲಿ ಹಿಂದಿ ಇರುತ್ತೆ’ ಎಂದು ಟ್ವೀಟ್ ಮಾಡಿದ್ದಾರೆ.

ರೂಪೇಶ್ ರಾಜಣ್ಣ ಅವರ ಈ ಟ್ವೀಟ್‌ಗೆ ಅನೇಕರು ಪರ–ವಿರೋಧದ ಚರ್ಚೆ ಮಾಡಿದ್ದಾರೆ. ಹಿಂದಿ ಹೇರಿಕೆ ವ್ಯಾಪಕವಾಗುತ್ತಿದೆ ಎಂದು ಕೆಲವರು ಆರೋಪಿಸಿದರೆ, ಇನ್ನೂ ಕೆಲವರು ನಂದಿನಿ ಬ್ರ್ಯಾಂಡ್ ಎಂಬುದು ರಾಷ್ಟ್ರಮಟ್ಟದಲ್ಲಿ ಮಾರಾಟವಾಗುವಂತದ್ದು. ಹಾಗಾಗಿ ಇದರಲ್ಲಿ ತಪ್ಪೇನಿಲ್ಲ ಎಂದು ವಾದಿಸಿದ್ದಾರೆ.

‘ಎಂದೂ ಇಲ್ಲದ ಹಿಂದಿ, ನಂದಿನಿ ಮೇಲೆ ಈಗೇಕೆ’ ಎಂದು ಇನ್ನೂ ಕೆಲವರು ಕೇಳಿದ್ದಾರೆ.

ರೂಪೇಶ್ ರಾಜಣ್ಣ ಹಂಚಿಕೊಂಡಿರುವ ನಂದಿನಿ ಪ್ರೋಬಯೊಟಿಕ್ ಮೊಸರಿನ ಪ್ಯಾಕೆಟ್ ಫೆಬ್ರುವರಿ 25, 2023ರಂದು ತಯಾರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.