ಪೊನ್ನಂಪೇಟೆಯಲ್ಲಿ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಶಾಫಿ ಜುಮಾ ಮಸೀದಿಯ ಕಟ್ಟಡ
ಮಡಿಕೇರಿ: ಎರಡು ಶತಮಾನಗಳಿಗೂ ಅಧಿಕ ಇತಿಹಾಸವುಳ್ಳ ಮಸೀದಿಯೊಂದು ಶಿಥಿಲಾವಸ್ಥೆಯಲ್ಲಿದ್ದಾಗ, ಅದರ ಅಭಿವೃದ್ಧಿಗೆ ಮುಸ್ಲಿಮರೊಂದಿಗೆ ಟೊಂಕ ಕಟ್ಟಿ ನಿಂತವರು 50ಕ್ಕೂ ಅಧಿಕ ಹಿಂದೂಗಳು ಹಾಗೂ 8ಕ್ಕೂ ಅಧಿಕ ಕ್ರೈಸ್ತರು.
ಧರ್ಮ ಭೇದದ ಭಾವವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ನಿಂತು ಹೊಸ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದರಿಂದ ಪೊನ್ನಂಪೇಟೆಯಲ್ಲಿ ಶಾಫಿ ಜುಮಾ ಮಸೀದಿ ಶನಿವಾರ ಉದ್ಘಾಟನೆಗೊಂಡಿತು.
‘ಬೆಂಗಳೂರಿನ ಬಿಬಿಎಂಪಿ ಸದಸ್ಯರಾಗಿದ್ದ ಬಿಜೆಪಿಯ ನಾರಾಯಣರಾಜು ಎಂಬುವವರು ಮಸೀದಿಗಾಗಿ ₹ 2.5 ಲಕ್ಷವನ್ನು ಉದಾರವಾಗಿ ದೇಣಿಗೆ ನೀಡಿದ್ದಾರೆ. ಸುರೇಶ್ ಎಂಬುವವರು ಮಸೀದಿಗೆ ಬೇಕಾದ ಪೀಠೋಪಕರಣಗಳನ್ನು ತಯಾರಿಸಿದ್ದಾರೆ. ಕ್ರೈಸ್ತ ಧರ್ಮದ ರಾಜು ಪಿಳ್ಳೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ಅನೇಕ ಮಂದಿ ವಿವಿಧ ಧರ್ಮೀಯರು ನಮ್ಮೊಂದಿಗೆ ಕೈ ಜೋಡಿಸಿದ್ದರಿಂದ ಇಂತಹ ಭವ್ಯವಾದ ಮಸೀದಿ ನಿರ್ಮಾಣ ಸಾಧ್ಯವಾಯಿತು’ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಪಿ.ಎ.ಅಸೀಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇಂತಹ ಅಪರೂಪದ ಕೋಮುಸೌಹಾರ್ದದ ಶಾಫಿ ಜುಮಾ ಮಸೀದಿಯು ಮಿನಾರ್ ರಹಿತ ವಿಭಿನ್ನವಾದ ಆರಾಧನಾಲಯವಾಗಿದೆ. ನಿರ್ಮಾಣಕ್ಕೆ ₹ 2 ಕೋಟಿಗೂ ಅಧಿಕ ವೆಚ್ಚವಾಗಿದೆ. ಏಕಕಾಲಕ್ಕೆ 600 ಮಂದಿ ಪ್ರಾರ್ಥನೆ ಸಲ್ಲಿಸಬಹುದಾದಷ್ಟು ವಿಸ್ತಾರವಾಗಿರುವ ಇದು ಪೊನ್ನಂಪೇಟೆ ತಾಲ್ಲೂಕಿನಲ್ಲೇ ಅತ್ಯಂತ ದೊಡ್ಡ ಮಸೀದಿ ಎಂಬ ಹೆಸರು ಪಡೆದಿದೆ.
ಮಸೀದಿಯು ಈ ಭಾಗದಲ್ಲಿ ಇದುವರೆಗೂ ಸಹಾಯ ಕೇಳಿ ಬಂದವರಿಗೆ ಇಲ್ಲ ಎಂದಿಲ್ಲ. ಯಾವುದೇ ಧರ್ಮದವರು ಸಹಾಯ ಕೇಳಿ ಬಂದಲ್ಲಿ ಅವರಿಗೆ ಸಹಾಯ ಮಾಡುವ ಮೂಲಕ ಎಲ್ಲ ಧರ್ಮೀಯರ ವಿಶ್ವಾಸಕ್ಕೆ ಮಸೀದಿ ಪಾತ್ರವಾಗಿದೆ.
ಭ್ರಾತೃತ್ವದ ಸಂಕೇತದಂತಿರುವ ಮಸೀದಿಯನ್ನು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತುಕೋಯ ತಂಗಳ್ ಅವರು ಶನಿವಾರ ಉದ್ಘಾಟಿಸಿ ಪ್ರಾರ್ಥನೆಗೆ ಮುಕ್ತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.