ADVERTISEMENT

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಗಂಗಾವತಿಯ ಹಿರೇಬೆಣಕಲ್‌ ಸೇರಿಸಲು ತಯಾರಿ: ಪಾಟೀಲ

ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 13:42 IST
Last Updated 4 ಸೆಪ್ಟೆಂಬರ್ 2025, 13:42 IST
ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಹಿರೇಬೆಣಕಲ್‌ ತಾಣದ ಛಾಯಾಚಿತ್ರ ಪ್ರದರ್ಶನವನ್ನು ಸಚಿವ ಎಚ್‌.ಕೆ.ಪಾಟೀಲ್‌ ವೀಕ್ಷಿಸಿದರು.
ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಹಿರೇಬೆಣಕಲ್‌ ತಾಣದ ಛಾಯಾಚಿತ್ರ ಪ್ರದರ್ಶನವನ್ನು ಸಚಿವ ಎಚ್‌.ಕೆ.ಪಾಟೀಲ್‌ ವೀಕ್ಷಿಸಿದರು.   

ಬೆಂಗಳೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್‌ ಪ್ರಾಗೈತಿಹಾಸಿಕ ತಾಣವನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ನಗರದ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಏರ್ಪಡಿಸಿರುವ ಗವಿವರ್ಣ ಚಿತ್ರಕಲೆಗಳ ಛಾಯಾಚಿತ್ರ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ಕು ವರ್ಷದ ಹಿಂದೆಯೇ ಇದನ್ನು ತಾತ್ಕಾಲಿಕವಾಗಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಅಂತಿಮ ಪಟ್ಟಿಗೆ ಸೇರಿಸುವ ಸಂಬಂಧ ಭಾರತೀಯ ಪುರಾತತ್ವ, ಸರ್ವೇಕ್ಷಣಾ ಇಲಾಖೆ, ಕೊಪ್ಪಳ ಜಿಲ್ಲಾಡಳಿತ, ಯುನೆಸ್ಕೊ ಸಮಿತಿ ಸದಸ್ಯರೊಂದಿಗೆ ಸಮಾಲೋಚಿಸಿ ವರದಿ ಸಿದ್ದಪಡಿಸಲಾಗುತ್ತಿದೆ. ಸದ್ಯದಲ್ಲೇ ಕೇಂದ್ರ ಸಂಸ್ಕೃತಿ ಸಚಿವಾಲಯದ ಶಿಫಾರಸಿನೊಂದಿಗೆ ವಿಶ್ವ ಪರಂಪರೆ ಸಮಿತಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಇಲಾಖೆಯ ಆಯುಕ್ತ ಎ.ದೇವರಾಜು, ಆರ್ಟ್‌ ಗ್ಯಾಲರಿ ನಿರ್ದೇಶಕಿ ಸುಮಿತ್ರಾ ರೆಡ್ಡಿ, ಉಪನಿರ್ದೇಶಕಿ ಕಾವ್ಯಶ್ರೀ,  ಸಹಾಯಕ ನಿರ್ದೇಶಕ ಎ.ಎಲ್‌.ಗೌಡ ಹಾಜರಿದ್ದರು.

ಆಕರ್ಷಕ ಪ್ರದರ್ಶನ: ಹಿರೇಬೆಣಕಲ್‌ ಭಾಗದ ಸುಮಾರು 100 ಚಿತ್ರಗಳು ಅಲ್ಲಿನ ಐತಿಹಾಸಿಕ ಮಹತ್ವವನ್ನು ಸಾರುತ್ತವೆ. ಕಲ್ಲುಗಳ ಮೇಲೆ ಆಗಿನ ಬದುಕಿನ ಚಿತ್ರಣ ಚಿತ್ರಿಸಿರುವುದನ್ನು ಛಾಯಾಚಿತ್ರಗಳಲ್ಲಿ ಸೆರೆ ಹಿಡಿಯಲಾಗಿದೆ. ಪಕ್ಷಿ, ಪ್ರಾಣಿ, ಹಾವುಗಳನ್ನು ಒಳಗೊಂಡ ದೋಣಿಯ ಚಿತ್ರವೂ ಆಕರ್ಷಕವಾಗಿದೆ. ಒಂದು ತಿಂಗಳ ಕಾಲ ಪ್ರದರ್ಶನ ಇರಲಿದೆ.

ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ. ಹಿರಿಯರಿಗೆ ₹50 ಹಾಗೂ ಮಕ್ಕಳಿಗೆ ₹30 ದರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.