ADVERTISEMENT

ನ್ಯಾಯಾಧೀಶರ ಕೈವಾಡವೂ ಇದೆ: ಗುರುಪ್ರಸಾದ್

ಗೌರಿ ಲಂಕೇಶ್‌ ಕೊಲೆ ಆರೋಪ ಅಮಾಯಕ ಕಾರ್ಯಕರ್ತರ ಮೇಲೆ ಕಟ್ಟುವ ಯತ್ನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2018, 19:30 IST
Last Updated 11 ಆಗಸ್ಟ್ 2018, 19:30 IST
ಹಿಂದೂ ಜನ ಜಾಗೃತಿ ಸಮಿತಿ ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ‘ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗೊಳಿಸಲು’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಮಿತಿಯ ಗುರುಪ್ರಸಾದ್ ಮಾತನಾಡಿದರು. ಪ್ರಜಾವಾಣಿ ಚಿತ್ರ
ಹಿಂದೂ ಜನ ಜಾಗೃತಿ ಸಮಿತಿ ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ‘ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗೊಳಿಸಲು’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಮಿತಿಯ ಗುರುಪ್ರಸಾದ್ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಆರೋಪವನ್ನು ಅಮಾಯಕ ಕಾರ್ಯಕರ್ತರ ಮೇಲೆ ಕಟ್ಟುವಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ), ನ್ಯಾಯಾಧೀಶರ ಕೈವಾಡ ಹಾಗೂ ರಾಜಕೀಯ ಒತ್ತಡ ಇದೆ’ ಎಂದು ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗಂಭೀರ ಆರೋಪ ಮಾಡಿದರು.

ಹಿಂದೂ ಜನ ಜಾಗೃತಿ ಸಮಿತಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗೊಳಿಸಲು’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ಪ್ರಕರಣದ ಆರೋಪಿ ಸುರೇಶ್‌ ಮೇಲೆ ಒತ್ತಡ ಹೇರುವ ಎಸ್‌ಐಟಿ ಅಧಿಕಾರಿಗಳು ಅದನ್ನು ಬಾಯಿ ಪಾಠ ಮಾಡಿಸುತ್ತಾರೆ. ಮರು ದಿನ ಬೆಳಿಗ್ಗೆ 9.30ಕ್ಕೆ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ. ಆ ಸಂದರ್ಭದಲ್ಲಿ ವಕೀಲರನ್ನು ಬಿಟ್ಟರೆ ಬೇರೆ ಯಾರೂ ಅಲ್ಲಿರುವುದಿಲ್ಲ. ಆತ ಹೇಳಿಕೆ ನೀಡುವಾಗ ನ್ಯಾಯಾಧೀಶರಿಗೆ ಫೋನ್ ಕರೆ ಬರುತ್ತದೆ, ನಾವು ನ್ಯಾಯವನ್ನು ಅಪೇಕ್ಷಿಸುವ ನ್ಯಾಯಾಧೀಶರಿಗೇ ಕರೆ ಬರುತ್ತದೆ. ‘ಸುರೇಶ್ ಹೇಳಿಕೆ ನೀಡಿದ್ದಾನಲ್ಲ’ ಎಂದು ಕರೆ ಮಾಡಿದ ವ್ಯಕ್ತಿ ಕೇಳುತ್ತಾರೆ. ಆ ನಂತರ ನ್ಯಾಯಾಧೀಶರ ಕೊಠಡಿಗೆ ಎಸ್‌ಐಟಿಯ ಮೂವರು ಅಧಿಕಾರಿಗಳು ಹೋಗುತ್ತಾರೆ. ಕೇಸರಿ ಭಯೋತ್ಪಾದನೆ ಸ್ಥಾಪಿಸಲು ಈ ರೀತಿ ಮಾಡುತ್ತಾರೆ’ ಎಂದರು.

‘ಅಮಾಯಕ ಕಾರ್ಯಕರ್ತರನ್ನು ಬಂಧಿಸಿ ಹಿಂಸೆ ನೀಡಿ ಆರೋಪ ಸಾಬೀತುಪಡಿಸುವ ಯತ್ನ ನಡೆಯುತ್ತಿದೆ. ಇದೇ ರೀತಿ ನಡೆದರೆ ನಾವು ದಂಗೆ ಏಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಬೇಕಿದೆ. ರಾಜ್ಯದಲ್ಲಿ ಒಟ್ಟು 27 ಮಂದಿ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿಲ್ಲ. ಗೌರಿ ಪ್ರಕರಣದಲ್ಲಿ ಪಿಸ್ತೂಲ್ ನೀಡಿದ ಬಶೀರ್ ಎಂಬಾತನನ್ನು ಸಹ ಬಂಧಿಸಿಲ್ಲ’ ಎಂದು ದೂರಿದರು.

ADVERTISEMENT

ಆರೋಪಿಗಳ ಪರ ವಕೀಲ ಉಮಾಶಂಕರ್, ರಾಜಶ್ರೀ ಜಡಿ, ಅಮಿತ್ ಬದ್ದಿ ತಾಯಿ ಮತ್ತು ಪತ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.