ADVERTISEMENT

ಹೈ.ಕ.ಪ್ರ.ಮಂಗೆ ಮಂಜೂರಾದ ಅನುದಾನದಲ್ಲಿ ₹436 ಕೋಟಿ ಬಳಕೆ ಆಗಿಲ್ಲ: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 11:37 IST
Last Updated 11 ಡಿಸೆಂಬರ್ 2018, 11:37 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ವಿಧಾನ ಪರಿಷತ್ ನಲ್ಲಿ ಮಾತನಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಇದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ವಿಧಾನ ಪರಿಷತ್ ನಲ್ಲಿ ಮಾತನಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಇದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಳಗಾವಿ: ‘ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಇದುವರೆಗೆ ಮಂಜೂರಾದ ಅನುದಾನದಲ್ಲಿ ₹ 436.32 ಕೋಟಿ ಮಾತ್ರ ಬಳಕೆ ಆಗಬೇಕಿದೆ. ಇಷ್ಟೂ ಹಣವನ್ನು ಈ ಆರ್ಥಿಕ ವರ್ಷದೊಳಗೆ ಬಳಕೆ ಮಾಡಲಾಗುತ್ತದೆ’ ಎಂದು ಕಾನೂನು ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ತಿಗೆ ತಿಳಿಸಿದರು.

ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಹಾಗೂ ಶರಣಪ್ಪ ಮಟ್ಟೂರ ಅವರ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಅವರು ಮಂಗಳವಾರ ಉತ್ತರಿಸಿದರು.

‘ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಸಿಕೊಂಡರೆ, ಬಜೆಟ್‌ನಲ್ಲಿ ಘೋಷಿಸಿರುವುದಕ್ಕಿಂತಲೂ ಹೆಚ್ಚು ಅನುದಾನ ಬಿಡುಗಡೆಗೆ ಸಿದ್ಧರಿದ್ದೇವೆ’ ಎಂದರು.

ADVERTISEMENT

‘ಮಂಡಳಿಗೆ 2013ರ ನಂತರ ಒಟ್ಟು ₹ 6,412 ಕೋಟಿ ಅನುದಾನ ಮಂಜೂರಾಗಿದೆ. ಆದರೆ, ಬಿಡುಗಡೆ ಆಗಿರುವುದು ₹ 2,928 ಕೋಟಿ ಮಾತ್ರ. ಆ ಹಣವೂ ಸಂಪೂರ್ಣ ಬಳಕೆ ಆಗಿಲ್ಲ’ ಎಂದು ಶರಣಪ್ಪ ಮಟ್ಟೂರ ದೂರಿದರು.

‘ಅನುದಾನವನ್ನು ಆಯಾ ಹಣಕಾಸು ವರ್ಷದಲ್ಲೇ ಬಳಕೆ ಆಗದಿದ್ದರೆ ಅದು ಹಿಂದಕ್ಕೆ ಪಡೆಯುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಬಳಕೆ ಆಗದೆ ಉಳಿದ ಅನುದಾನ ಶೇ 20ಕ್ಕಿಂತ ಹೆಚ್ಚು ಇದ್ದರೆ ಅದು ಹಿಂದಕ್ಕೆ ಹೋಗಲಿದೆ ಎಂದು ಷರತ್ತು ವಿಧಿಸಲಾಗುತ್ತಿದೆ’ ಎಂದರು.

ಸ್ಪಷ್ಟೀಕರಣ ನೀಡಿದ ಸಚಿವ ಕೃಷ್ಣ ಬೈರೇಗೌಡ, ‘ಅನುದಾನವನ್ನು ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಎರಡು ಕಂತುಗಳ ಹಣವನ್ನು ಶೇ 75ರಷ್ಟು ಬಳಕೆ ಆದರೆ ಮಾತ್ರ ಮೂರನೇ ಮತ್ತು ನಾಲ್ಕನೇ ಕಂತುಗಳ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ, ಬಿಡುಗಡೆಯಾದ ಅನುದಾನವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ರಘುನಾಥ ರಾವ್‌ ಮಲ್ಕಾಪೂರೆ, ‘ಈ ಪ್ರದೇಶದಲ್ಲಿ ಖಾಲಿ ಇರುವ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹಿಂದಿನ ಸರ್ಕಾರ ಭರವಸೆ ನೀಡಿತ್ತು. ಆದರೆ ಭರ್ತಿ ಆಗಿರುವುದು 12 ಸಾವಿರ ಹುದ್ದೆಗಳು ಮಾತ್ರ. ಹುದ್ದೆಗಳು ಖಾಲಿ ಇದ್ದರೆ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಕೆ ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಈ ಪ್ರದೇಶದಲ್ಲಿ ಖಾಲಿ ಇದ್ದ 25 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಕೊರತೆ ಬಹಳಷ್ಟು ಕಡಿಮೆ ಆಗಿರುವುದರಿಂದ ಈ ವರ್ಷ ಅನುದಾನ ಬಳಕೆ ಆಗದ ಪರಿಸ್ಥಿತಿ ಬರುವುದಿಲ್ಲ’ ಎಂದು ಕೃಷ್ಣ ಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.