ADVERTISEMENT

ಓಮೈಕ್ರಾನ್‌: ಸೌಮ್ಯ ಲಕ್ಷಣ– ಮನೆ ಆರೈಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 3:36 IST
Last Updated 7 ಜನವರಿ 2022, 3:36 IST
   

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಲಕ್ಷಣ ರಹಿತರು ಹಾಗೂ ಸೌಮ್ಯ ಲಕ್ಷಣ ಇರುವವರು ಮನೆ ಆರೈಕೆಗೆ ಒಳಗಾಗಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಬಗ್ಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.ಸಣ್ಣ ಪ್ರಮಾಣದಲ್ಲಿ ಉಸಿರಾಟದ ಸಮಸ್ಯೆ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 93ಕ್ಕಿಂತ ಕಡಿಮೆ ಇರುವವರು ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದು ತಿಳಿಸಲಾಗಿದೆ.

ಮನೆಯಲ್ಲಿ ಆರೈಕೆಗೆ ಒಳಗಾಗುವರು ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿರಬೇಕು. ಆರೋಗ್ಯ ಕಾರ್ಯಕರ್ತರು ಅವರ ಮೇಲೆ ನಿಗಾ ಇಡಬೇಕು.60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಅನಾರೋಗ್ಯ ಸಮಸ್ಯೆ ಹೊಂದಿರುವವರು ಮನೆ ಆರೈಕೆಗೆ ಒಳಗಾಗುವಂತಿಲ್ಲ. ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು, ಅವರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಲಾಗಿದೆ.

ADVERTISEMENT

ಸೋಂಕಿತರು ಇರುವ ಕೊಠಡಿ ಗಾಳಿ– ಬೆಳಕಿನಿಂದ ಕೂಡಿರಬೇಕು. ಕಿಟಕಿಗಳನ್ನು ತೆರೆದಿಡಬೇಕು. ಸೋಂಕಿತರು ಮೂರು ಪದರಗಳ ಮುಖಗವಸು (ಮಾಸ್ಕ್‌) ಧರಿಸಬೇಕು.ದ್ರವ ರೂಪದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಪಲ್ಸ್ ಆಕ್ಸಿಮೀಟರ್ ನೆರವಿನಿಂದ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ದೇಹದ ಉಷ್ಣತೆಯ ಬಗ್ಗೆಯೂ ಗಮನ ವಹಿಸಬೇಕು ಎಂದು ಸೂಚಿಸಲಾಗಿದೆ.

ನಿರಂತರ ಜ್ವರ ಇದ್ದಲ್ಲಿ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಲ್ಲಿ, ರಕ್ತದಲ್ಲಿನ ಆಮ್ಲಜನಕ ಮಟ್ಟ ಶೇ 93ಕ್ಕಿಂತ ಕಡಿಮೆಯಾದರೆ, ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೆ, ಅತಿಯಾದ ಆಯಾಸ ಹಾಗೂ ಮಾನಸಿಕ ಕಿರಿಕಿರಿ ಹಾಗೂ ಗೊಂದಲ ಹೆಚ್ಚಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಆಸ್ಪತ್ರೆಗೆ ದಾಖಲಾಗಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.