ADVERTISEMENT

₹ 10,208 ಕೋಟಿ ಜಿಎಸ್‌ಟಿ ಪರಿಹಾರ ಕೊಡಿ: ಕೇಂದ್ರಕ್ಕೆ ಬೊಮ್ಮಾಯಿ ಮನವಿ

40ನೇ ಜಿಎಸ್‌ಟಿ ಮಂಡಳಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 21:28 IST
Last Updated 12 ಜೂನ್ 2020, 21:28 IST
ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ನೀಡಬೇಕಾದ ₹ 10,208 ಕೋಟಿಯನ್ನು ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಗುರುವಾರ ವಿಡಿಯೊ ಸಂವಾದದ ಮೂಲಕ ನಡೆದ 40ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಬೊಮ್ಮಾಯಿ ಭಾಗಿಯಾಗಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರವು ನಾಲ್ಕು ತಿಂಗಳ ಪರಿಹಾರ ರೂಪದಲ್ಲಿ ಇಷ್ಟು ದುಡ್ಡು ನೀಡುವುದು ಬಾಕಿ ಇದೆ. ಸದ್ಯ ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಮಾರ್ಚ್‌ ತಿಂಗಳ ಪರಿಹಾರ ಮೊತ್ತವಾದ ₹ 1,460 ಕೋಟಿಯನ್ನು ತಕ್ಷಣ ಬಿಡುಗಡೆ ಮಾಡಲು ವಿನಂತಿ ಮಾಡಲಾಗಿದೆ’ ಎಂದರು.‌

ADVERTISEMENT

‘ಪರಿಹಾರ ಶೀಘ್ರ ಬಿಡುಗಡೆಯಾಗುವ ವಿಶ್ವಾಸ ಇದೆ. ಡಿಸೆಂಬರ್‌ನಿಂದ ಫೆಬ್ರುವರಿವರೆಗಿನ ₹ 4,314 ಕೋಟಿಯನ್ನು ರಾಜ್ಯ ಸರ್ಕಾರ ಈಚೆಗೆ ಪಡೆದಿತ್ತು’ ಎಂದು ಹೇಳಿದರು.

‘ಜಿಎಸ್‌ಟಿ ಪಾವತಿ ವಿಳಂಬಕ್ಕೆ ಹಾಕುವ ಶೇ 18ರ ದಂಡವನ್ನು ಅರ್ಧದಷ್ಟು ಅಂದರೆ ಶೇ 9ಕ್ಕೆ ತಗ್ಗಿಸಬೇಕು ಎಂದು ಒತ್ತಾಯಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.