ADVERTISEMENT

ಶಿವಮೊಗ್ಗ ಪ್ರಕರಣ: ಪೊಲೀಸರ ವಿರುದ್ಧವೂ ತನಿಖೆಗೆ ಸೂಚಿಸಿದ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 16:06 IST
Last Updated 23 ಫೆಬ್ರುವರಿ 2022, 16:06 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಶಿವಮೊಗ್ಗ ನಗರದಲ್ಲಿ ಸಮಾಜಘಾತುಕ ಶಕ್ತಿಗಳ ಬೆಳವಣಿಗೆಯಲ್ಲಿ ಪೊಲೀಸರ ಪಾತ್ರವೂ ಇದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್‌ ಸೂದ್‌ ಅವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.

ಈ ಸಂಬಂಧ ಡಿಜಿಪಿಗೆ ಬುಧವಾರ ಟಿಪ್ಪಣಿಯೊಂದನ್ನು ನೀಡಿರುವ ಗೃಹ ಸಚಿವರು, ‘ಸಮಾಜಘಾತುಕ ಶಕ್ತಿಗಳು ಮತ್ತು ಪೊಲೀಸರ ನಡುವಿನ ನಂಟಿನ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಬಗ್ಗೆ ವಿಸ್ತೃವಾದ ತನಿಖೆ ನಡೆಸಿ, ವಾರದೊಳಗೆ ವರದಿ ಸಲ್ಲಿಸಬೇಕು’ ಎಂದು ಸೂಚನೆ ನೀಡಿದ್ದಾರೆ.

ಬಜರಂಗ ದಳ ಕಾರ್ಯಕರ್ತನಾಗಿದ್ದ ಹರ್ಷ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿಷಯದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದರು ಮತ್ತು ಕರ್ತವ್ಯಲೋಪ ಎಸಗಿದ್ದರು ಎಂಬ ಆರೋಪಗಳ ಬಗ್ಗೆಯೂತ ನಿಖೆ ನಡೆಸುವಂತೆ ಗೃಹ ಸಚಿವರು ನಿರ್ದೇಶನ ನೀಡಿದ್ದಾರೆ.

ADVERTISEMENT

ಕೊಲೆ ಆರೋಪಿಗಳ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಮತ್ತು ಕೋಟೆ ಪೊಲೀಸ್‌ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿ ಇದೆ. ಈ ಎರಡೂ ಠಾಣೆಗಳಲ್ಲಿ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ, ಆರೋಪಿಗಳ ವಿರುದ್ಧ ಏನು ಕ್ರಮಗಳನ್ನು ಕೈಗೊಂಡಿದ್ದರು ಎಂಬ ವರದಿಯನ್ನು ನೀಡಬೇಕು’ ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.

ಎರಡೂ ಠಾಣೆಗಳಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದರೆ, ನಿರ್ಲಕ್ಷ್ಯ ತೋರಿದ್ದರೆ ಎಂಬುದನ್ನೂ ಪರಿಶೀಲಿಸಬೇಕು. ಆರೋಪಿಗಳ ವಿಚಾರದಲ್ಲಿ ಹಿರಿಯ ಅಧಿಕಾರಿಗಳು ನೀಡಿರುವ ಮಾರ್ಗದರ್ಶನಗಳನ್ನು ಸರಿಯಾಗಿ ಪಾಲನೆ ಆಗಿವೆಯೇ ಎಂಬುದನ್ನೂ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.