ADVERTISEMENT

ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆ ಈಗ ಅಪ್ರಸ್ತುತ: ಗೃಹ ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 9:25 IST
Last Updated 20 ಏಪ್ರಿಲ್ 2025, 9:25 IST
<div class="paragraphs"><p>ಜಿ. ಪರಮೇಶ್ವರ, ಗೃಹ ಸಚಿವ</p></div>

ಜಿ. ಪರಮೇಶ್ವರ, ಗೃಹ ಸಚಿವ

   

ಬೆಂಗಳೂರು: ‘ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆ ಈಗ ಅಪ್ರಸ್ತುತ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ‌ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ’ ಎಂದರು. 

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ ಕುರಿತ ಪ್ರಶ್ನೆಗೆ, ‘ಒಂದಿಷ್ಟು ಸತ್ಯ ಹೇಳಿದರೆ ಹೊಗಳುವುದು ಏನು ಬಂತು. ಸಿದ್ದರಾಮಯ್ಯ ಅವರು ಹದಿನಾರು ಬಜೆಟ್ ಕೊಟ್ಟಿದ್ದು ಸತ್ಯ ಅಲ್ಲವೇ? ಅವರು ರಾಜ್ಯದಲ್ಲಿ ಆರ್ಥಿಕ ಸಮನ್ವಯತೆ ಸಾಧಿಸಿದ್ದಾರೆ. ಅದನ್ನು ಹೊಗಳಿಕೆ ಅಂದುಕೊಂಡರೆ ಅಂದುಕೊಳ್ಳಲಿ’ ಎಂದರು.

‘ಕಳೆದ ಹಲವು ವರ್ಷಗಳಿಂದ ಬೆಂಗಳೂರು– ಮೈಸೂರು ಮೂಲಸೌಕರ್ಯ ಕಾರಿಡಾರ್‌ (ಬಿಎಂಐಸಿ) ಯೋಜನೆಯ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರ ಜಮೀನು ಕೊಟ್ಟಿದ್ದು, 300ಕ್ಕೂ ಹೆಚ್ಚು ಪ್ರಕರಣ ಕೋರ್ಟ್‌ನಲ್ಲಿದೆ. ಈ ಸಮಸ್ಯೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅರ್ಧ ಗಂಟೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿ ಬಗ್ಗೆ ಚರ್ಚೆ ಆಗಬೇಕೆಂದು ಸಂಪುಟ ಉಪ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿ ನನ್ನನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಸಮಿತಿಯಲ್ಲಿ ಎಚ್.ಕೆ. ಪಾಟೀಲ ಸೇರಿ ಹಿರಿಯ ಸಚಿವರು ಸದಸ್ಯರಾಗಿದ್ದಾರೆ. ಟಿ.ಬಿ. ಜಯಚಂದ್ರ ಅವರು ಹಿಂದೆ ನೀಡಿದ್ದ ವರದಿಯನ್ನು ಕೂಡ ನಾವು ಅಧ್ಯಯನ ಮಾಡಿ ನಮ್ಮ ವರದಿ ಕೊಡುತ್ತೇವೆ’ ಎಂದರು.

ನನಗೆ ಹೆಚ್ಚು ಮಾಹಿತಿ ಇಲ್ಲ:

‘ಜನಿವಾರ ವಿವಾದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ನಾನೂ ಕೂಡ ಇದನ್ನು ಖಂಡಿಸಿದ್ದೇನೆ. ಯಾಕೆ ಆ ರೀತಿ ಮಾಡಿದರು, ಯಾರು ಸೂಚನೆ ಕೊಟ್ಟರು ಎನ್ನುವುದು ಗೊತ್ತಿಲ್ಲ. ಯಾಕೆ ತೆಗೆಸಿದರು, ಏನು ಕಾರಣವೋ ಗೊತ್ತಿಲ್ಲ’ ಎಂದರು.

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ:

‘ಜಾತಿ ಜನಗಣತಿ ವರದಿ ಜಾರಿಗೆ ವರ್ಷವಾಗಲಿದೆ’ ಎಂಬ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ಬಗ್ಗೆ ಕೇಳಿದಾಗ, ‘ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗುತ್ತದೆ. ಇದು ಜಟಿಲ ಎಂದು ನನಗೇನೂ ಕಾಣುತ್ತಿಲ್ಲ’ ಎಂದರು.

ರಾಕೇಶ್ ಮಲ್ಲಿ ಭಾಗಿ ವಿಚಾರ ಗೊತ್ತಿಲ್ಲ:

‘ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಯಾರು ಗುಂಡು ಹಾರಿಸಿದ್ದಾರೆಂದು ತನಿಖೆಯ ನಂತರ ಗೊತ್ತಾಗಲಿದೆ. ಇಂತಹ ವಿಷಯದಲ್ಲಿ ಊಹಾಪೋಹ ಮಾಡಲು ಆಗುವುದಿಲ್ಲ. ಗುಂಡು ಹಾರಿಸಿದವರು ಸಿಕ್ಕಿದ ನಂತರ ಗೊತ್ತಾಗಲಿದೆ. ರಾಕೇಶ್ ಮಲ್ಲಿ ಭಾಗಿ ಆಗಿರುವ ಬಗ್ಗೆಯೂ ಗೊತ್ತಿಲ್ಲ’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.