ADVERTISEMENT

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್‌ಐಎಗೆ

ರೌಡಿಶೀಟರ್ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತ ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕಣವನ್ನು ಕೇಂದ್ರ ಗೃಹ ಇಲಾಖೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2025, 20:19 IST
Last Updated 8 ಜೂನ್ 2025, 20:19 IST
<div class="paragraphs"><p>ಸುಹಾಸ್ ಶೆಟ್ಟಿ</p></div>

ಸುಹಾಸ್ ಶೆಟ್ಟಿ

   

ಮಂಗಳೂರು: ಹಿಂದುತ್ವವಾದಿ ಕಾರ್ಯಕರ್ತ ಹಾಗೂ ರೌಡಿ ಶೀಟರ್‌ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರಿಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿ ಕೇಂದ್ರ ಗೃಹ ಸಚಿವಾಲಯ ಶನಿವಾರ ಆದೇಶಿಸಿದೆ.

ಈ ಆದೇಶದ ಪ್ರತಿಯನ್ನು ಟ್ವೀಟ್ ಮಾಡಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ADVERTISEMENT

ಆದೇಶದಲ್ಲಿ ಏನಿದೆ: ಸುಹಾಸ್ ಶೆಟ್ಟಿ 2025ರ ಮೇ 1ರಂದು ಇತರ ಕೆಲವು ವ್ಯಕ್ತಿಗಳೊಂದಿಗೆ ಕಾರಿನಲ್ಲಿ ತೆರಳುವಾಗ ಸಫ್ವಾನ್ ಮತ್ತು ಇತರ ಎಂಟು ಮಂದಿ ಸೇರಿಕೊಂಡು ಆತನ ಮೇಲೆ ದಾಳಿ ನಡೆಸಿದ್ದು, ಆತ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದ್ದ. ಈ ಬಗ್ಗೆ ಮಂಗಳೂರು ನಗರದ ಉತ್ತರ ಉಪ ವಿಭಾಗದ ಬಜಪೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (4), 191 (2), 191 (3), 126 (2), 109, 118 (1), 103 (1)61 (1), 62 , 351 (2), 351 (3) ಮತ್ತು 190 ಹಾಗೂ 1959ರ ಸಶಸ್ತ್ರ ಕಾಯ್ದೆಯ ಸೆಕ್ಷನ್ 3 (1) ಮತ್ತು ಸೆಕ್ಷನ್ 25ರ ಅಡಿ ಎಫ್‌ಐಆರ್ ದಾಖಲಾದ ಮಾಹಿತಿ ಸಿಕ್ಕಿದೆ. ಜನರ ಮನಸ್ಸಿನಲ್ಲಿ ಆತಂಕ ಸೃಷ್ಟಿಸಲು ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿ ನಡೆಸಿದ ಕೃತ್ಯ ಇದಾಗಿದ್ದು, ಇದರಲ್ಲಿ ಭಾಗಿಯಾದ ಆರೋಪಿಗಳು ನಿಷೇಧಿತ ಕಾನೂನುಬಾಹಿರ ಸಂಸ್ಥೆ ಪಿಎಫ್‌ಐ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬ ಆರೋಪವಿರುವುದರಿಂದ 1967ರ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ (ಯುಎಪಿಎ)  ಸೆಕ್ಷನ್ 10, ಸೆಕ್ಷನ್41, ಸೆಕ್ಷನ್ 13, ಸೆಕ್ಷನ್ 15, ಸೆಕ್ಷನ್ 17, ಸೆಕ್ಷನ್ 18, ಮತ್ತು ಸೆಕ್ಷನ್ 20 ಕೂಡಾ ಇದಕ್ಕೆ ಅನ್ವಯವಾಗುತ್ತದೆ.

ಈ ಪ್ರಕರಣದ ಗಂಭೀರತೆಯನ್ನು ಹಾಗೂ ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಇದರ ಹಿಂದಿನ ದೊಡ್ಡ ಸಂಚನ್ನು ಬಯಲಿಗೆಳೆಯುವ ಅಗತ್ಯವಿದೆ. ಅದಕ್ಕಾಗಿ ಇದನ್ನು ಎನ್ಐಎಯಿಂದ ತನಿಖೆ ನಡೆಸುವ ಅಗತ್ಯವಿದೆ. ಈ ಕಾರಣದಿಂದಾಗಿ 2008ರ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯ ಅನುಸೂಚಿತ ಅಪರಾಧಗಳ ಅಡಿ ಈ ಪ್ರಕರಣವು ಬರುತ್ತದೆ ಎಂದು ಕೇಂದ್ರ ಸರ್ಕಾರವು ಅಭಿಪ್ರಾಯಪಡುತ್ತದೆ. 2008ರ ಎನ್ಐಎ ಕಾಯ್ದೆಯ ಸೆಕ್ಷನ್ 6 (5) ಮತ್ತು ಸೆಕ್ಷನ್ 8ರಲ್ಲಿ ನೀಡಲಾದ ಅಧಿಕಾರ ಬಳಸಿಕೊಂಡು ಕೇಂದ್ರ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಎನ್‌ಐಎಗೆ ನಿರ್ದೇಶನ ನೀಡುತ್ತಿದೆ ಎಂದು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.‌

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ನ ಪೊಲೀಸರು ಈ ಹತ್ಯೆ ಸಂಬಂಧ ಈಗಾಗಲೇ 12 ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.