ADVERTISEMENT

ಮೋದಿಯೇ ಹನಿಟ್ರ್ಯಾಪ್‌ನ ಪಿತಾಮಹ ಹೇಳಿಕೆ | ವಿಜಯೇಂದ್ರ–ಹರಿಪ್ರಸಾದ್‌ ಜಟಾಪಟಿ

ಪ್ರಧಾನಿ ನರೇಂದ್ರ ಮೋದಿಯೇ ಹನಿಟ್ರ್ಯಾಪ್‌ನ ಪಿತಾಮಹ ಹೇಳಿಕೆ: ‘ಎಕ್ಸ್‌’ನಲ್ಲಿ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
   
ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯೇ ಹನಿಟ್ರ್ಯಾಪ್‌ನ ಪಿತಾಮಹ’ ಎಂಬ ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ರಾಜ್ಯ ರಾಜಕಾರಣದಲ್ಲಿ ಯಾವ ಪ್ರಾಮುಖ್ಯವೂ ಇಲ್ಲದ ನಾಯಕ’ ಎಂದು ಹರಿಪ್ರಸಾದ್ ಅವರನ್ನು ಜರೆದಿದ್ದಾರೆ. ಇಬ್ಬರೂ ನಾಯಕರು ‘ಎಕ್ಸ್‌’ನಲ್ಲಿ ಪರಸ್ಪರ ವಿರುದ್ಧ ಕಟು ವಾಕ್ಸಮರ ನಡೆಸಿದ್ದಾರೆ

‘ಪ್ರಾಮುಖ್ಯತೆ ಇಲ್ಲದ ನಾಯಕ’

ಅತಿರೇಕದ, ಅವಿವೇಕದ, ಕೊಳಕು ಹೇಳಿಕೆಗಳನ್ನು ನೀಡುವ ಹರಿಪ್ರಸಾದ್‌ ಅವರೇ, ಕಾಂಗ್ರೆಸ್‌ ಆಳ್ವಿಕೆಯ ಕೊಳಕುಗಳನ್ನು ಸ್ವಚ್ಛ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಅದನ್ನು ಸಹಿಸಲು ನಿಮಗೆ ಆಗುತ್ತಿಲ್ಲ. ನಿಮ್ಮ ಪಕ್ಷದ ತಟ್ಟೆಯಲ್ಲಿ ಹಗರಣಗಳ ಹೆಗ್ಗಣ ಸತ್ತು ಬಿದ್ದಿದೆ. ಹನಿಟ್ರ್ಯಾಪ್‌ ಸೇಡಿನ ರಾಜಕಾರಣದ ದಳ್ಳುರಿ ಕಾಂಗ್ರೆಸ್‌ ಮನೆಯನ್ನು ಸುಡುತ್ತಿದೆ. ಇಷ್ಟಾದರೂ ಪಾಠ ಕಲಿಯದ ನೀವು, ಪರಿಶುದ್ಧ ಸರೋವರಕ್ಕೆ ಕಲ್ಲು ಎಸೆಯುತ್ತಿದ್ದೀರಿ.

ಹನಿಟ್ರ್ಯಾಪ್‌ ಕುರಿತ ನಿಮ್ಮ ಹೇಳಿಕೆ ನಿಮ್ಮ ಮಲಿನ ಮನಸ್ಥಿತಿ, ಹರಕು ನಾಲಿಗೆಯ ವ್ಯಕ್ತಿತ್ವವನ್ನು ಪರಿಚಯಿಸಿದೆ. ರಾಜ್ಯ ರಾಜಕಾರಣದಲ್ಲಿ ಪ್ರಾಮುಖ್ಯತೆಯಿಲ್ಲದ ರಾಜಕಾರಣಿ ನೀವು ಎಂಬುದು ಜನರಿಗೆ ಗೊತ್ತಿದೆ. ನೀವೊಬ್ಬ ವಿಧಾನ ಪರಿಷತ್ ಸದಸ್ಯರು ಎಂಬ ಸ್ಥಾನ ಮತ್ತು ಗೌರವ ಮಾತ್ರ ನಿಮಗಿದೆಯೇ ಹೊರತು ಸಾಮಾಜಿಕವಾಗಿ, ರಾಜಕೀಯವಾಗಿ ಯಾವ ಕ್ಷೇತ್ರದಲ್ಲೂ ಗೌರವದ ಸ್ಥಾನ ಉಳಿಸಿಕೊಂಡಿಲ್ಲ.

ADVERTISEMENT

ಹಿರಿಯ ರಾಜಕಾರಣಿಯಾಗಿ ನಿಮಗೆ ಸಾಮಾಜಿಕ ಬದ್ಧತೆ ಇದ್ದರೆ, ರಾಜಕೀಯ ಬದ್ಧತೆ ಇದ್ದರೆ, ನೀವೊಬ್ಬ ನೈಜ ಕಾಂಗ್ರೆಸಿಗರೇ ಆಗಿದ್ದರೆ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಭ್ರಷ್ಟ ಹಗರಣಗಳ ಹಾಗೂ ಹನಿಟ್ರ್ಯಾಪ್ ಪ್ರಕರಣದ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸಿ ನಿಮ್ಮ ನೈತಿಕತೆ ಉಳಿಸಿಕೊಳ್ಳಿ.

 -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

‘ಎಳಸು ರಾಜಕಾರಣಿ’

ಕಲೆಕ್ಷನ್‌ ಅನ್ನೇ ಅರ್ಹತೆ, ಡಿನೋಟಿಫಿಕೇಷನ್‌ ಅನ್ನೇ ಉದ್ಯೋಗ, ಹೊಂದಾಣಿಕೆ ರಾಜಕೀಯವನ್ನೇ ಧ್ಯೇಯ ಮಾಡಿಕೊಂಡಿರುವ ವಿಜಯೇಂದ್ರ ನಿಮ್ಮ ಪಕ್ಷದವರ ಘನಘೋರ ಆರೋಪಗಳಿಗೆ ಮೊದಲು ಉತ್ತರಿಸಿ. ಅದನ್ನು ಬಿಟ್ಟು, ಅಲ್ಲಾಡುತ್ತಿರುವ ಪೇಮೆಂಟ್‌ ಸೀಟನ್ನು ಭದ್ರ ಮಾಡಿಕೊಳ್ಳುವ ಉದ್ದೇಶದಿಂದ ಮೋದಿ ವಿರುದ್ಧದ ನನ್ನ ಹೇಳಿಕೆಗೆ ಮೈಪರಚಿಕೊಳ್ಳುತ್ತಿದ್ದೀರಿ.

ನನ್ನ ರಾಜಕೀಯ ಜೀವನದ ಅನುಭವದಷ್ಟೂ ವಯಸ್ಸಾಗಿರದ ವಿಜಯೇಂದ್ರ ಎಳಸು ರಾಜಕಾರಣಿ ಎಂಬುದನ್ನು ಬಿಜೆಪಿ ನಾಯಕರೇ ಹಾದಿಬೀದಿಯಲ್ಲಿ ಹೇಳುತ್ತಿದ್ದಾರೆ. ನಿಮ್ಮ ಅಧಿಕಾರದ ದಾಹಕ್ಕಾಗಿ ಶಾಸಕರನ್ನು ಖರೀದಿ ಮಾಡಿದ ಕಾರಣಕ್ಕಾಗಿ ‘ಬಾಂಬೆ ಬಾಯ್ಸ್’ಗಳು ತಮ್ಮ ವಿರುದ್ಧ ಯಾವುದೇ
ಮಾನಹಾನಿ ಪ್ರಸಾರ ಮಾಡಬಾರದೆಂದು ಕೋರ್ಟ್ ಮೂಲಕ ನಿರ್ಬಂಧ ತಂದಿರುವುದು ಯಾವ
ಪುರುಷಾರ್ಥಕ್ಕಾಗಿ? ಆ ಹನಿಟ್ರ್ಯಾಪ್‌ನ ಕಿಂಗ್‌ಪಿನ್ ನೀವೇ ಎಂದು ಯತ್ನಾಳ್ ಹೇಳಿರುವ ಮಾತಿಗೆ ಉತ್ತರ ಕೊಡುವ ಧೈರ್ಯ ಇದೆಯಾ?

ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. ಎಲ್ಲಾ ಪಕ್ಷದ ಹನಿಟ್ರ್ಯಾಪ್‌ಗಳ ಬಗ್ಗೆ ಮಾತಾಡುವ ಎದೆಗಾರಿಕೆ, ಧೈರ್ಯ, ಸಾಮಾಜಿಕ ಬದ್ಧತೆ ಎಲ್ಲವನ್ನು ಉಳಿಸಿಕೊಂಡೇ ಬಹಿರಂಗವಾಗಿ ಮಾತಾಡುತ್ತೇನೆ. ಆದರೆ ನಾನು ಕೇಳುವ ಒಂದೇ ಒಂದು ಪೋಕ್ಸೊ ಪ್ರಕರಣದ ಬಗ್ಗೆ ಬಹಿರಂಗವಾಗಿ ಸತ್ಯ ಹೇಳುವ, ಧೈರ್ಯ ಕಿಂಚಿತ್ತಾದರೂ ನಿಮ್ಮ ಎದೆಯಲ್ಲಿ ಇದ್ದರೇ ಬನ್ನಿ ಬಹಿರಂಗ ಸವಾಲಿಗೆ.

 -ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.