ADVERTISEMENT

‘ನ್ಯೂವ್ ಕಮ್ಯೂಟ್‌’: ‘ಹಾರಿಜಾಂಟಲ್‌ ಲಿಫ್ಟ್‌’

ಆರ್. ಮಂಜುನಾಥ್
Published 12 ಫೆಬ್ರುವರಿ 2025, 21:31 IST
Last Updated 12 ಫೆಬ್ರುವರಿ 2025, 21:31 IST
‘ಇನ್ವೆಸ್ಟ್‌ ಕರ್ನಾಟಕ’ದಲ್ಲಿ ಪ್ರದರ್ಶನವಾಗಿರುವ ‘ನ್ಯೂವ್ ಕಮ್ಯೂಟ್‌’ ವಿದ್ಯುತ್‌ ಚಾಲಿತ ವಾಹನ
ಪ್ರಜಾವಾಣಿ ಚಿತ್ರ ಪ್ರಶಾಂತ್ ಎಚ್.ಜಿ.
‘ಇನ್ವೆಸ್ಟ್‌ ಕರ್ನಾಟಕ’ದಲ್ಲಿ ಪ್ರದರ್ಶನವಾಗಿರುವ ‘ನ್ಯೂವ್ ಕಮ್ಯೂಟ್‌’ ವಿದ್ಯುತ್‌ ಚಾಲಿತ ವಾಹನ ಪ್ರಜಾವಾಣಿ ಚಿತ್ರ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಗಾಜಿನ ದ್ವಾರದ ಮುಂದೆ ನಿಂತರೆ ಬಾಗಿಲು ತಂತಾನೆ ತೆರೆದುಕೊಳ್ಳುತ್ತದೆ, ವಾಹನ ಸ್ವಾಗತ ಕೋರಿ ಒಳಗೆ ಕರೆದುಕೊಳ್ಳುತ್ತದೆ. ಯಾವ ಪ್ರದೇಶಕ್ಕೆ ಹೋಗಬೇಕು ಎಂಬುದನ್ನು ಮೆನುವಿನಲ್ಲಿ ಆಯ್ಕೆ ಮಾಡಿಕೊಂಡರೆ, ಅಲ್ಲಿಗೆ ಕರೆದೊಯ್ದು ಬಿಡುತ್ತದೆ. ಬಹುಮಹಡಿಯಲ್ಲಿ ಲಿಫ್ಟ್‌ ಬಳಸಿದಂತೆ, ರಸ್ತೆಯಲ್ಲಿ ಈ ವಾಹನವನ್ನು ಬಳಸಬಹುದು...

ಇದರ ಹೆಸರು ‘ನ್ಯೂವ್ ಕಮ್ಯೂಟ್‌’. ಮೆಟ್ರೊದಂತೆ ತನಗೆ ಸೀಮಿತವಾದ ಹಳಿಯಲ್ಲಿ, ಟೈರ್‌ಗಳಲ್ಲಿ ಸಂಚರಿಸುವ ಈ ವಾಹನವನ್ನು ‘ಹಾರಿಜಾಂಟಲ್‌ ಲಿಫ್ಟ್‌’ ಎಂದೂ ಕರೆಯಲಾಗುತ್ತದೆ. ಬಹುಮಹಡಿಗೆ ಹೋಗುವ ಲಿಫ್ಟ್‌ ಮೇಲಕ್ಕೆ ಹೋದರೆ, ಇದು ರಸ್ತೆಯಲ್ಲಿ ಸಮತಲವಾಗಿ ಸಾಗುತ್ತದೆ.

‘ಇನ್ವೆಸ್ಟ್‌ ಕರ್ನಾಟಕ’ದಲ್ಲಿ ಪ್ರದರ್ಶನವಾಗಿರುವ ‘ನ್ಯೂವ್ ಕಮ್ಯೂಟ್‌’ ವಿದ್ಯುತ್‌ ಚಾಲಿತ ವಾಹನ. ಸುಮಾರು 25 ಕಿ.ಮೀ ವೇಗದಲ್ಲಿ ಸಾಗುವ, ಸುಮಾರು ಮೂರು ಕಿ.ಮೀ ಸಂಚರಿಸಲು ಅತ್ಯುತ್ತಮ ‘ಸಂಪರ್ಕ ವಾಹನ’. ವಿಶ್ವವಿದ್ಯಾಲಯ, ಕಂಪನಿಗಳ ಕ್ಯಾಂಪಸ್‌, ರೆಸಾರ್ಟ್‌ಗಳಲ್ಲಿ ಬಳಸುವ ವಿದ್ಯುತ್‌ ಚಾಲಿತ ವಾಹನಗಳಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ನೋಡಿದಾಗ, ಕೇಬಲ್‌ ಕಾರ್‌, ಮೆಟ್ರೊದ ಚಿಕ್ಕ ಬೋಗಿ ಎಂದೆನಿಸುತ್ತದೆ. ಆದರೆ, ಇದು ಸ್ವಯಂಚಾಲಿತ ವಾಹನ. 

ADVERTISEMENT

ಏಳರಿಂದ ಎಂಟು ಜನರು ಅಥವಾ 10 ರಿಂದ 12 ಜನರು ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ನೆಲದಿಂದ ಸುಮಾರು ಎರಡು ಅಡಿಯಷ್ಟು ಎತ್ತರದಲ್ಲಿ ಸ್ಥಾಪಿಸುವ ಹಳಿಯಲ್ಲಿ ಸಂಚರಿಸುವ  ‘ನ್ಯೂವ್ ಕಮ್ಯೂಟ್‌’ ಹವಾನಿಯಂತ್ರಿತ. ಸಿಸಿ ಟಿವಿ ಕ್ಯಾಮೆರಾಗಳನ್ನೂ ಒಳಗೊಂಡಿದ್ದು, ನಿಯಂತ್ರಣ ಕಚೇರಿಗೆ ನೇರವಾದ ದೃಶ್ಯಗಳನ್ನೂ ರವಾನಿಸುತ್ತದೆ. ಚಾಲಕರಹಿತವಾಗಿ, ಪ್ರಯಾಣಿಕರು ವಾಹನದಲ್ಲಿ ನಮೂದಿಸಿರುವ ಸ್ಥಳಕ್ಕೆ ತಲುಪುತ್ತದೆ. ಎಷ್ಟು ವೇಗದಲ್ಲಿ ಹೋಗುತ್ತಿದೆ, ಹೊರಗಿನ ತಾಪಮಾನವೆಷ್ಟು ಎಂಬಂತಹ ಮಾಹಿತಿಯನ್ನೂ ಪರದೆ ಹಾಗೂ ಧ್ವನಿ ಮೂಲಕ ನೀಡುತ್ತದೆ. ‘ನ್ಯೂವ್ ಕಮ್ಯೂಟ್‌’ ವಾಹನವನ್ನು ಬೆಂಗಳೂರಿನ ದೇವನಹಳ್ಳಿಯರುವ ಸೆಲ್‌ಪ್ರೊ ಸಂಸ್ಥೆಯ ರಾಜ್ಯದ ಯುವಕರು ನಿರ್ಮಿಸಿದ್ದಾರೆ.

‘ಆರು ದಿನಗಳಲ್ಲಿ ಇಲ್ಲಿ ಹಳಿಯನ್ನು ನಿರ್ಮಿಸಿ, ‘ನ್ಯೂವ್ ಕಮ್ಯೂಟ್‌’ ವಾಹನ ಸಂಚರಿಸುವಂತೆ ಮಾಡಿದ್ದೇವೆ. ಇದು ವಿದ್ಯುತ್‌ ಚಾಲಿತ ವಾಹನವಾಗಿದ್ದು, ಪ್ರತಿ ಕಿ.ಮೀ.ಗೆ ₹1 ನಿರ್ವಹಣಾ ವೆಚ್ಚವಾಗಲಿದೆ. ವಾಹನ ಹಾಗೂ ಹಳಿ ಸ್ಥಾಪನಾ ವೆಚ್ಚ ಒಂದುಬಾರಿಯದ್ದಾಗಿದೆ. ಮೆಟ್ರೊದಂತಹ ವ್ಯವಸ್ಥೆಯನ್ನೇ ಇಲ್ಲೂ ಅಳವಡಿಸಿಕೊಳ್ಳಲಾಗಿದೆ. ಆದರೆ, ಜನರು ತಾವು ತಲುಪಬೇಕಾದ ಸ್ಥಳಕ್ಕೆ, ಲಿಫ್ಟ್‌ನಲ್ಲಿ ಆಯ್ಕೆ ವ್ಯವಸ್ಥೆಯ ಸೌಲಭ್ಯ ನೀಡಲಾಗಿದೆ’ ಎಂದು ಸೆಲ್‌ಪ್ರೊ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಎಂ. ಪ್ರಣಂ ಮಾಹಿತಿ ನೀಡಿದರು.

‘ವಿಮಾನ ನಿಲ್ದಾಣ, ದೊಡ್ಡ ಟೌನ್‌ಶಿಪ್‌, ಕ್ಯಾಂಪಸ್‌, ರೆಸಾರ್ಟ್‌, ಥೀಮ್‌ ಪಾರ್ಕ್‌ಗಳಲ್ಲಿ ಅಳವಡಿಸಬಹುದು. ಮೆಟ್ರೊದಿಂದ ಬಸ್‌ನಿಲ್ದಾಣಗಳಿಗೆ ಹೋಗಲು ಇದನ್ನು ಸ್ಥಾಪನೆ ಮಾಡಬಹುದು’ ಎಂದು ಹೇಳಿದರು.

‘ಇನ್ವೆಸ್ಟ್‌ ಕರ್ನಾಟಕ’ದಲ್ಲಿ ಪ್ರದರ್ಶನವಾಗಿರುವ ‘ನ್ಯೂವ್ ಕಮ್ಯೂಟ್‌’ ವಿದ್ಯುತ್‌ ಚಾಲಿತ ವಾಹನ ಪ್ರಜಾವಾಣಿ ಚಿತ್ರ ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.