ADVERTISEMENT

ಬಿಸಿಯೂಟ: ಹಾಲಿನೊಂದಿಗೆ ಹಾರ್ಲಿಕ್ಸ್‌!

ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಸೌಲಭ್ಯ ನೀಡುತ್ತಿರುವ ಶಿಕ್ಷಕರು

ಎಂ.ಮಹೇಶ
Published 12 ಡಿಸೆಂಬರ್ 2018, 20:06 IST
Last Updated 12 ಡಿಸೆಂಬರ್ 2018, 20:06 IST
ಮುದವಿ ತೋಟದ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಬಡಿಸುವ ಒಂದು ನೋಟ
ಮುದವಿ ತೋಟದ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಬಡಿಸುವ ಒಂದು ನೋಟ   

ಬೆಳಗಾವಿ: ರೈಲು ಬೋಗಿಗಳನ್ನು ಹೋಲುವ ಗೋಡೆ, ಮಕ್ಕಳಿಗೆ ನಿತ್ಯವೂ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿ ತಿನಿಸು, ಹಾಲಿನೊಂದಿಗೆ ಹಾರ್ಲಿಕ್ಸ್‌ ಅಥವಾ ಬೋರ್ನ್‌ವಿಟಾ, ಶಾಲೆಯಲ್ಲಿಯೇ ಕೇಕ್‌ ಕತ್ತರಿಸಿ ಮಕ್ಕಳ ಜನ್ಮದಿನ ಆಚರಣೆ ಹಾಗೂ ಇದಕ್ಕಾಗಿ ಶಿಕ್ಷಕರ ವೇತನದ ಒಂದಿಷ್ಟು ಹಣ ಮಕ್ಕಳಿಗೆ ಸೌಲಭ್ಯಕ್ಕಾಗಿ ಮೀಸಲು!

– ಇದು, ಜಿಲ್ಲೆಯ ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ಮುದವಿ ತೋಟದಲ್ಲಿರುವ ಕನ್ನಡ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವೈಶಿಷ್ಟ್ಯ. ಮುಖ್ಯಶಿಕ್ಷಕ ಅಮಸಿದ್ದ ತೆವರಟ್ಟಿ ಹಾಗೂ ಸಹಶಿಕ್ಷಕಿ ಕವಿತಾ ಪಾಟೀಲ ಅವರು ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಕೈಗೊಂಡಿರುವ ಕ್ರಮಗಳು ಗಮನ ಸೆಳೆಯುತ್ತಿವೆ.

ತೋಟದಲ್ಲಿ ವಾಸಿಸುವವರ ಮಕ್ಕಳ ಅನುಕೂಲಕ್ಕಾಗಿ ಸರ್ಕಾರವು ಅಲ್ಲಲ್ಲಿ ಶಾಲೆಗಳನ್ನು ನಡೆಸುತ್ತಿದೆ. ಮುದವಿ ತೋಟದ ಸುತ್ತಮುತ್ತಲಿನ ಮಕ್ಕಳನ್ನು ಆಕರ್ಷಿಸುವುದಕ್ಕಾಗಿ ಶಾಲಾ ಕೊಠಡಿಗಳ ಗೋಡೆಗಳನ್ನು ಬೋಗಿಗಳಂತೆ ಚಿತ್ರಿಸಲಾಗಿದೆ. 1ರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ 2010ರಲ್ಲಿ ಮಕ್ಕಳ ಸಂಖ್ಯೆ 43 ಇತ್ತು. ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

ADVERTISEMENT

ಜನ್ಮದಿನ ಆಚರಣೆ: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಅನ್ನ– ಸಾರು ನೀಡುವುದು ಸಾಮಾನ್ಯ. ಆದರೆ, ಇಲ್ಲಿನ ಮುಖ್ಯಶಿಕ್ಷಕರು ಸ್ವಂತ ಖರ್ಚಿನಿಂದ ಚಪಾತಿ, ರೊಟ್ಟಿ, ಶ್ಯಾವಿಗೆ ಪಾಯಸ, ಅವಲಕ್ಕಿ, ಝುಣಕ, ಉಪ್ಪಿಟ್ಟು, ಗುಲಾಬ್‌ ಜಾಮೂನು, ದೋಸೆ, ಇಡ್ಲಿ, ಕೇಸರಿಬಾತ್... ಮೊದಲಾದವುಗಳನ್ನು ಒಂದೊಂದು ದಿನ ಮಾಡಿಸುತ್ತಿದ್ದಾರೆ.ಅವರಿಗೆ ಸಹಶಿಕ್ಷಕಿ ಕವಿತಾ ಪಾಟೀಲ ಕೂಡ ನೆರವಾಗುತ್ತಿದ್ದಾರೆ.

ಮಕ್ಕಳ ಪೌಷ್ಟಿಕತೆಗಾಗಿ ಸರ್ಕಾರದಿಂದ ನೀಡಲಾಗುವ ಕ್ಷೀರಭಾಗ್ಯ ಹಾಲಿನೊಂದಿಗೆ ಹಾರ್ಲಿಕ್ಸ್ ಅಥವಾ ಬೋರ್ನ್‌ವಿಟಾ ಬೆರೆಸಿ ಕೊಡಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಗಳಿಗೆ ಟೈ ಹಾಗೂ ಬೆಲ್ಟ್‌ಗಳನ್ನು ಕೊಡಿಸುತ್ತಿದ್ದಾರೆ.

ಪೋಷಕರನ್ನೂ ಆಹ್ವಾನಿಸಿ, ಶಾಲೆಯ ಆವರಣದಲ್ಲಿಯೇ ಮಕ್ಕಳ ಜನ್ಮದಿನವನ್ನು ಆಚರಿಸುವುದು ಇಲ್ಲಿನ ಮತ್ತೊಂದು ವಿಶೇಷ. ಶಿಕ್ಷಕರೇ ಕೇಕ್ ತರಿಸಿ ಎಲ್ಲರಿಗೂ ಸಿಹಿ ಹಂಚಲಾಗುತ್ತದೆ. ಇಂಥ ಕ್ರಮಗಳ ಮೂಲಕ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿ, ಗಡಿಯಲ್ಲಿ ಕನ್ನಡ ಶಾಲೆ ಉಳಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ.

ವೈಯಕ್ತಿಕ ಖರ್ಚು

‘ಈ ಭಾಗದಲ್ಲಿ ಖಾಸಗಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪೈಪೋಟಿ ಇದೆ. ಹೀಗಾಗಿ, ತೋಟದ ಮನೆಗಳಲ್ಲಿನ ಮಕ್ಕಳು ಸರ್ಕಾರಿ ಶಾಲೆಗೆ ಬರುವಂತೆ ಮಾಡುವುದಕ್ಕಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಗ್ರಾಮಸ್ಥರು, ಎಸ್‌ಡಿಎಂಸಿಯವರು ಹಾಗೂ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳ ಮೂಲಕವೂ ಕಲಿಕೆಗೆ ಪ್ರಯತ್ನಿಸಲಾಗುತ್ತಿದೆ. ತಿಂಗಳಿಗೆ ಎರಡು ಸಾವಿರ ರೂಪಾಯಿಯನ್ನು ವೈಯಕ್ತಿಕವಾಗಿ ಖರ್ಚು ಮಾಡುತ್ತಿದ್ದೇನೆ. ಮಕ್ಕಳಿಗೆ ಪೌಷ್ಟಿಕಾಂಶ ದೊರೆಯಲೆಂದು ಹಲವು ಆಹಾರ ಪದಾರ್ಥಗಳನ್ನು ನೀಡುತ್ತಿದ್ದೇವೆ. ಇದಕ್ಕೆ ಅಡುಗೆಯವರಾದ ರೂಪಾ ಚೌಗುಲೆ ಹಾಗೂ ಶೋಭಾ ಬಡಕಿ ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ’ ಎಂದು ಮುಖ್ಯ ಶಿಕ್ಷಕ ಅಮಸಿದ್ದ ತೆವರಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೂರು ವರ್ಷದ ಹಿಂದೆ ಬಂದ ಮುಖ್ಯಶಿಕ್ಷಕರು ಇಲ್ಲಿ ಮಾದರಿ ಕ್ರಮಗಳನ್ನು ಕೈಗೊಂಡಿದ್ದಾರೆ. ವಿಭಿನ್ನ ಬೋಧನಾ ಶೈಲಿ, ಕಲಿಕಾ ವ್ಯವಸ್ಥೆಗಳಿಂದಾಗಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಈ ಶಾಲೆಯು ಪೈಪೋಟಿ ನೀಡುತ್ತಿದೆ. ಹೀಗಾಗಿ ನಾವು ಎಲ್ಲ ರೀತಿಯಿಂದಲೂ ಸಹಕಾರ ಕೊಡುತ್ತಿದ್ದೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಪ್ಪಾಸಾಬ ಸೊಂದಕರ ತಿಳಿಸಿದರು.

* ಶಾಲೆಗೆ ಕಾಂಪೌಂಡ್ ನಿರ್ಮಿಸಿ, ಉದ್ಯಾನ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಇಲ್ಲಿಯೇ ಬೆಳೆಯಲು ಉದ್ದೇಶಿಸಲಾಗಿದೆ.

- ಅಮಸಿದ್ದ ತೆರವಟ್ಟಿ, ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.