ADVERTISEMENT

ಹೊಸೂರಿಗೆ ಮೆಟ್ರೊ‌ ಸಾಧ್ಯತೆ ಇಲ್ಲ: ತಮಿಳುನಾಡಿನ‌ ಪ್ರಯತ್ನಕ್ಕೆ ‌ಅಡ್ಡಿ

ತಮಿಳುನಾಡಿನ ಮೊದಲ ಅಂತರರಾಜ್ಯ ಮೆಟ್ರೊ ಮಾರ್ಗಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
   

ಬೆಂಗಳೂರು: ಬೆಂಗಳೂರು– ಹೊಸೂರು ಸಂಪರ್ಕಿಸುವ ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೊ ಮಾರ್ಗ ನಿರ್ಮಿಸುವ ತಮಿಳುನಾಡಿನ ಯೋಜನೆ ನನಸಾಗದೇ ಇರುವ ಹಂತಕ್ಕೆ ತಲುಪಿದೆ.

ಎರಡೂ ರಾಜ್ಯಗಳ ಮೆಟ್ರೊ ವ್ಯವಸ್ಥೆಗಳು ವಿಭಿನ್ನ ವಿದ್ಯುತ್ ಶಕ್ತಿ ಚಾಲಿತ ತಾಂತ್ರಿಕತೆಯನ್ನು ಬಳಸುತ್ತಿರುವುದರಿಂದ ಸಂಯೋಜಿಸಲು ಸಾಧ್ಯವಿಲ್ಲ. ಹಾಗಾಗಿ 23 ಕಿ.ಮೀ. ಉದ್ದದ ಹೊಸೂರು-ಬೊಮ್ಮಸಂದ್ರ ಕಾರಿಡಾರ್ ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಚೆನ್ನೈ ಮೆಟ್ರೊ ರೈಲು ಲಿಮಿಟೆಡ್ (ಸಿಎಂಆರ್‌ಎಲ್) 25 ಕೆ.ವಿ. ಎಸಿ ಓವರ್‌ಹೆಡ್ ಶಕ್ತಿ ಬಳಸಿಕೊಂಡು ಹೊಸೂರನ್ನು ಬೊಮ್ಮಸಂದ್ರದೊಂದಿಗೆ ಸಂಪರ್ಕಿಸಲು ಕಾರ್ಯಸಾಧ್ಯತಾ ಅಧ್ಯಯನವನ್ನು ಪ್ರಸ್ತಾಪಿಸಿತ್ತು.

ADVERTISEMENT

ಈ ಮಧ್ಯೆ ಬೊಮ್ಮಸಂದ್ರದಿಂದ ತಮಿಳುನಾಡಿನ ಕಡೆಗೆ ಕೊನೆಯ ಉಪನಗರವಾದ ಅತ್ತಿಬೆಲೆಗೆ ಮೆಟ್ರೊವನ್ನು ವಿಸ್ತರಿಸಲು ಬಿಎಂಆರ್‌ಸಿಎಲ್ ತನ್ನದೇ ಆದ ಅಧ್ಯಯನವನ್ನು ನಡೆಸಿತು. 11 ಕಿ.ಮೀ. ಉದ್ದದ ಈ ಮಾರ್ಗವು ನಮ್ಮ ಮೆಟ್ರೊ ಜಾಲದ ಉಳಿದ ಭಾಗಗಳಂತೆ 750 ಕೆ.ವಿ. ಡಿಸಿ ವಿದ್ಯುತ್‌ ಶಕ್ತಿ ಬಳಸಲಿದೆ. 

‘ನಾವು ನಮ್ಮ ಅಭಿಪ್ರಾಯವನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ. ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳುನಾಡು ಸರ್ಕಾರವು ಕೈಗಾರಿಕಾ ಪಟ್ಟಣವನ್ನು ಅಭಿವೃದ್ಧಪಡಿಸುವ ಪ್ರಯತ್ನದ ಭಾಗವಾಗಿ ಹೊಸೂರು-ಬೊಮ್ಮಸಂದ್ರ ಮೆಟ್ರೊ ಯೋಜನೆ ಆರಂಭಿಸುವ ಉದ್ದೇಶ ಹೊಂದಿತ್ತು. ಇದಕ್ಕೆ ಕರ್ನಾಟಕ
ದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆಯಿಂದ ಬೆಂಗಳೂರಿಗಿಂತ ಹೊಸೂರಿಗೆ ಹೆಚ್ಚು ಪ್ರಯೋಜನ
ವಾಗಲಿದೆ. ಬೆಂಗಳೂರಿಗೆ ಮತ್ತಷ್ಟು ಹೊರೆಯಾಗಲಿದೆ ಎಂಬುದು ವಿರೋಧ ವ್ಯಕ್ತಪಡಿಸಿದವರ ವಾದವಾಗಿತ್ತು. 

ಯೋಜನೆ ಪ್ರಕಾರ ಎರಡೂ ರಾಜ್ಯಗಳ ಗಡಿಯಲ್ಲಿ 300 ಮೀಟರ್‌ ಅಂತರದಲ್ಲಿ ಎರಡು ನಿಲ್ದಾಣಗಳು ನಿರ್ಮಾಣಗೊಳ್ಳಬೇಕು. ಈ 300 ಮೀಟರ್‌ ಅನ್ನು ಪಾದಚಾರಿ ಮೇಲ್ಸೇತುವೆ ಮೂಲಕ ದಾಟಬೇಕು. ಇದು ಕಾರ್ಯಸಾಧುವಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ವಿವಿಧ ಯೋಜನೆ:

ದೊಡ್ಡಜಾಲ-ದೇವನಹಳ್ಳಿಗೆ ನೀಲಿಮಾರ್ಗ ವಿಸ್ತರಣೆ, ಕೆ.ಆರ್‌.‍ಪುರದಿಂದ ಹೊಸಕೋಟೆಗೆ ನೇರಳೆ ಮಾರ್ಗ, ಕಡಬಗೆರೆಯಿಂದ ತಾವರಕೆರೆಗೆ ಬೆಳ್ಳಿ ಮಾರ್ಗ ವಿಸ್ತರಣೆ, ಕಾಳೇನ ಅಗ್ರಹಾರದಿಂದ ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಮತ್ತು ವರ್ತೂರು ಕೋಡಿ ಮೂಲಕ ಕಾಡುಗೋಡಿ ಟ್ರೀ ಪಾರ್ಕ್‌ಗೆ ಹೊಸದಾಗಿ 68 ಕಿಮೀ ಮಾರ್ಗ ನಿರ್ಮಿಸುವ ಯೋಜನೆಗಳಿವೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಮ್ಮ ಮೆಟ್ರೊ ಜಾಲವನ್ನು ದೆಹಲಿಯ ಮೆಟ್ರೊ ಜಾಲಕ್ಕೆ ಸಮಾನವಾಗಿ 470 ಕಿ.ಮೀ.ಗೆ ವಿಸ್ತರಿಸುವ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಬಿಎಂಆರ್‌ಸಿಎಲ್‌ಗೆ ತಿಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಳು ವಿಸ್ತರಣೆಗಳು ಮತ್ತು ಹೊಸ ಮಾರ್ಗಗಳು ಸೇರಿ ಒಟ್ಟು 210.9 ಕಿ.ಮೀ.ಆಗುತ್ತದೆ. ಇದು ನಮ್ಮ ಮೆಟ್ರೊದ ಒಟ್ಟು ಯೋಜಿತ ಜಾಲವನ್ನು 467.69 ಕಿ.ಮೀ.ಗಳಿಗೆ ತಲುಪಿಸಲಿದೆ. ದೆಹಲಿ-ಎನ್‌ಸಿಆರ್ ಮೆಟ್ರೊದ ಯೋಜಿತ ಜಾಲ 467 ಕಿ.ಮೀ.ಗಳಿಗೆ ಸಮಾನವಾಗಿರಲಿದೆ.

ವಿವಿಧೆಡೆ ವಿಸ್ತರಣೆ

ಬಿಎಂಆರ್‌ಸಿಎಲ್ ಮಾದಾವರದಿಂದ ತುಮಕೂರಿನವರೆಗೆ (59.6 ಕಿ.ಮೀ) ಹಸಿರು ಮಾರ್ಗವನ್ನು ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡಿದೆ. 25 ನಿಲ್ದಾಣಗಳನ್ನು ಹೊಂದಿರುವ ₹20,896 ಕೋಟಿ ವೆಚ್ಚದ ಈ ಮಾರ್ಗಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ.

ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಕನಕಪುರ ರಸ್ತೆಯ ಹಾರೋಹಳ್ಳಿಯವರೆಗಿನ ಹಸಿರು ಮಾರ್ಗದ ದಕ್ಷಿಣ ವಿಸ್ತರಣೆಯು 18 ನಿಲ್ದಾಣಗಳೊಂದಿಗೆ 24 ಕಿ.ಮೀ. ಉದ್ದವಿರುತ್ತದೆ. ಇದು ಹಳ್ಳಿಗಳ ಮೂಲಕ ಹಾದು ಹೋಗುವುದರಿಂದ ಕಡಿಮೆ ನಿಲ್ದಾಣಗಳಿರಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ನೇರಳೆ ಮಾರ್ಗವನ್ನು ಚಲ್ಲಘಟ್ಟದಿಂದ ಬಿಡದಿಯವರೆಗೆ 15 ಕಿ.ಮೀ. ವಿಸ್ತರಿಸುವ ಯೋಜನೆ ಇದೆ. ಇದು 13 ನಿಲ್ದಾಣಗಳನ್ನು ಹೊಂದಿರಲಿದೆ. ಈ 4 ವಿಸ್ತರಣೆಗಳಿಗೆ ಕಾರ್ಯಸಾಧ್ಯತಾ ವರದಿಗಳನ್ನು ಹೈದರಾಬಾದ್‌ನ ಆರ್ವೀ ಅಸೋಸಿಯೇಟ್ಸ್ ಆರ್ಕಿಟೆಕ್ಟ್ಸ್ ಎಂಜಿನಿಯರ್ಸ್ ಮತ್ತು ಕನ್ಸಲ್ಟೆಂಟ್ಸ್ ಪ್ರೈವೆಟ್ ಲಿಮಿಟೆಡ್ ಸಿದ್ಧಪಡಿಸಿದೆ.ಕರಡು ವರದಿಗಳು ಸಿದ್ಧವಾಗಿವೆ ಮತ್ತು ಅಕ್ಟೋಬರ್ ಅಂತ್ಯದ ವೇಳೆಗೆ ಅಂತಿಮಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.