ADVERTISEMENT

ಮನೆ ಸಿಕ್ಕಿಲ್ಲ, ಮಾಹಿತಿಯೂ ಇಲ್ಲ!

ರೇರಾ: ಪ್ರಗತಿ ವರದಿ ಸಲ್ಲಿಸದ 1,437 ಡೆವಲಪರ್‌ಗಳು

ಗುರು ಪಿ.ಎಸ್‌
Published 29 ನವೆಂಬರ್ 2020, 20:43 IST
Last Updated 29 ನವೆಂಬರ್ 2020, 20:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ಕೆ–ರೇರಾ) ಅಡಿ ನೋಂದಾಯಿಸಿಕೊಂಡಿರುವ ಡೆವಲಪರ್‌ಗಳ ಪೈಕಿ, ಶೇ 45ರಷ್ಟು ಬಿಲ್ಡರ್‌ಗಳು ಈವರೆಗೆ ಒಂದು ತ್ರೈಮಾಸಿಕ ವರದಿಯನ್ನು ಪ್ರಾಧಿಕಾರಕ್ಕೆ ನೀಡಿಲ್ಲ. ಗಡುವು ಪಾಲಿಸದ ಬಿಲ್ಡರ್‌ಗಳಿಂದ ತೊಂದರೆ ಅನುಭವಿಸಬೇಕಾಗಿದೆ ಎಂದು ಖರೀದಿದಾರರು ಹೇಳುತ್ತಾರೆ.

‘ಮನೆ ಖರೀದಿಸುವಾಗ ಡೆವಲಪರ್‌ಗಳು ರೇರಾ ಅಡಿ ನೋಂದಾಯಿಸಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ನೋಡಿ ಕೊಂಡೇ ನಾವು ಮುಂದುವರಿದಿದ್ದೆವು. ಆದರೆ, ರೇರಾದಲ್ಲಿ ಡೆವಲಪರ್‌ ನೋಂದಣಿಯಾಗಿದ್ದಾರೆ ಎಂಬುದು ಬಿಟ್ಟರೆ ಮತ್ತೆ ಯಾವ ಮಾಹಿತಿಯೂ ಸಿಗುತ್ತಿಲ್ಲ. ಮನೆ ನಿರ್ಮಾಣವೂ ಪೂರ್ಣಗೊಂಡಿಲ್ಲ’ ಎಂದು ಖರೀದಿದಾರರೊಬ್ಬರು ದೂರಿದರು.

ರಾಜ್ಯದಲ್ಲಿ ರೇರಾ ಅಡಿ 3,600 ಡೆವಲಪರ್‌ಗಳ 4,399 ಯೋಜನೆಗಳು ನೋಂದಣಿಯಾಗಿವೆ. ಈ ಪೈಕಿ 1,437 ಡೆವಲಪರ್‌ಗಳು ಈವರೆಗೆ ಒಮ್ಮೆಯೂ ತ್ರೈಮಾಸಿಕ ಪ್ರಗತಿ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿಲ್ಲ. ಇವರು ಕೈಗೆತ್ತಿ
ಕೊಂಡಿರುವ ಯೋಜನೆಗಳ ಸ್ಥಿತಿ–ಗತಿಯ ಕುರಿತು ಪ್ರಾಧಿಕಾರಕ್ಕೆ ಮಾಹಿತಿಯೇ ಇಲ್ಲ ಎಂದು ರೇರಾ ಕಾರ್ಯಕರ್ತರು ಹೇಳುತ್ತಾರೆ.

ADVERTISEMENT

‘ವರದಿ ಸಲ್ಲಿಸದವರಿಗೆ ನೋಟಿಸ್’

‘ಪ್ರಾಧಿಕಾರದ ವೆಬ್‌ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡುವಂತೆ ಆ.1, 29 ಮತ್ತು ಸೆ.17ರಂದು ಕೆಲವು ಡೆವಲಪರ್‌ಗಳಿಗೆ ನೋಟಿಸ್ ನೀಡಲಾಗಿದೆ. ಉಳಿದವರಿಗೆ ಶೀಘ್ರದಲ್ಲಿಯೇ ನೋಟಿಸ್ ನೀಡಲಾಗುವುದು’ ಎಂದು ರೇರಾ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಹೇಳಿದರು.

‘ಡೆವಲಪರ್‌ಗಳು ಯೋಜನೆಗಳ ಪ್ರಗತಿ ವಿವರ ಮತ್ತು ಲೆಕ್ಕಪತ್ರದ ವಿವರ ಸಲ್ಲಿಸುವುದು ಕಡ್ಡಾಯ. ತಪ್ಪಿದಲ್ಲಿ ಅವರ ನೋಂದಣಿ ಸಂಖ್ಯೆ ರದ್ದುಪಡಿಸುವ ಮತ್ತು ಯೋಜನಾ ವೆಚ್ಚದ ಶೇ 5ರಷ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಜೈಲುಶಿಕ್ಷೆಗೂ ಕಾಯ್ದೆಯಲ್ಲಿ ಅವಕಾಶವಿದೆ ಆಗಲಿದೆ’ ಎಂದರು.

‘ವರದಿ ನೀಡದ ಡೆವಲಪರ್‌ಗಳೊಂದಿಗೆ ವೆಬಿನಾರ್‌ ಮೂಲಕ ಸಭೆ ನಡೆಸಲಾಗುವುದು. ಅವರ ಸಮಸ್ಯೆ ಆಲಿಸಿ, ವರದಿ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.