ADVERTISEMENT

ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಡೋಸ್ ಲಸಿಕೆ: ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 21:00 IST
Last Updated 26 ಮೇ 2021, 21:00 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೋವಿಡ್ ಲಸಿಕೆಯು ಸರ್ಕಾರಕ್ಕಿಂತ ಖಾಸಗಿಯವರಿಗೆ ಹೆಚ್ಚು ಡೋಸ್ ಲಭ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ನಿಗದಿತ ಶೇ 25ಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಕೋವಿಡ್‌ ಸಂಬಂಧ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಇದು ಸಮಾನತೆಯ ಹಕ್ಕಿಗೆ ವಿರುದ್ಧ ಅಲ್ಲವೇ’ ಎಂದು ಪ್ರಶ್ನಿಸಿತು.

‘ಕೇಂದ್ರ ಸರ್ಕಾರದ ಶೇ 50ರ ಕೋಟಾದಲ್ಲಿ ಕರ್ನಾಟಕಕ್ಕೆ 24 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯ ಸರ್ಕಾರ ತನ್ನ ಶೇ 25ರಷ್ಟು ಕೋಟಾದಲ್ಲಿ 15.98 ಲಕ್ಷ ಡೋಸ್ ಖರೀದಿ ಮಾಡಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ಶೇ 25ರ ಕೋಟಾದಲ್ಲಿ 16.16 ಲಕ್ಷ ಲಸಿಕೆ ಖರೀದಿಸಿವೆ’ ಎಂದು ಕೇಂದ್ರ ಸರ್ಕಾರ ಪರ ವಾದಿಸಿದ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ ವಿವರಿಸಿದರು.

ADVERTISEMENT

‘ಖಾಸಗಿಯವರಿಗೆ ಶೇ 25ಕ್ಕಿಂತ ಹೆಚ್ಚಿನ ಡೋಸ್ ಸಿಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹಣ ಇದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್ ಪಡೆದು, ಸರ್ಕಾರದಿಂದ ಎರಡನೇ ಡೋಸ್ ಪಡೆಯುತ್ತಾರೆ. ಹಣ ಇಲ್ಲದವರು ಮೊದಲ ಡೋಸ್ ಕೂಡ ಪಡೆಯಲಾಗದ ಸ್ಥಿತಿ ಬರಲಿದೆ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.