ADVERTISEMENT

ಪ್ರಜಾವಾಣಿ ವಿಶೇಷ | ದುರ್ಬಲರ ‘ಸಾಮಾಜಿಕ ಭದ್ರತೆ‘ಯೂ ಅಭದ್ರ

ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಜಮೆಯಾಗದ ಪಿಂಚಣಿ ಹಣ

ಚಂದ್ರಹಾಸ ಹಿರೇಮಳಲಿ
Published 10 ಜೂನ್ 2023, 1:20 IST
Last Updated 10 ಜೂನ್ 2023, 1:20 IST
   

ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಹಣ ಪ್ರತಿ ತಿಂಗಳು ಜಮೆಯಾಗದೇ ಫಲಾನುಭವಿಗಳು ತೊಂದರೆ ಅನುಭವಿಸುತ್ತಿರುವ ಪ್ರಕರಣಗಳು ರಾಜ್ಯದ ಹಲವೆಡೆ ವರದಿಯಾಗಿವೆ.

ಪತಿ ಕಳೆದುಕೊಂಡ ಮಹಿಳೆಯರಿಗೆ ‘ವಿಧವಾ ವೇತನ’, 60 ವರ್ಷ ದಾಟಿದವರಿಗೆ ‘ಸಂಧ್ಯಾ ಸುರಕ್ಷಾ’, 40 ವರ್ಷ ದಾಟಿದರೂ ಕಂಕಣ ಭಾಗ್ಯ ಕೂಡಿಬಾರದ ಮಹಿಳೆಯರಿಗೆ ಹಾಗೂ ವಿಚ್ಛೇದಿತ ಮಹಿಳೆಯರಿಗೆ ‘ಮನಸ್ವಿನಿ’, ದೈಹಿಕ ನ್ಯೂನತೆ ಇರುವವರಿಗೆ ‘ಅಂಗವಿಕಲರ ಕಲ್ಯಾಣ’, ಲಿಂಗತ್ವ ಅಲ್ಪಸಂಖ್ಯಾತರಿಗೆ ‘ಮೈತ್ರಿ’, ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ನೀಡುವ ‘ರೈತ ಕಲ್ಯಾಣ’ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಅಡಿ ಪ್ರತಿ ತಿಂಗಳು ಆಯಾ ಯೋಜನೆಗಳಿಗೆ ನಿಗದಿ ಮಾಡಿರುವ ಪಿಂಚಣಿ ಮೊತ್ತವನ್ನು ಫಲಾನುಭವಿಗಳಿಗೆ ಜಮೆ ಮಾಡಲಾಗುತ್ತದೆ.

‘ಕಳೆದ ಎರಡು ಮೂರು ತಿಂಗಳುಗಳಿಂದ ಪಿಂಚಣಿ ಮೊತ್ತ ಸಿಕ್ಕಿಲ್ಲ. ಪ್ರತಿತಿಂಗಳು ಬ್ಯಾಂಕಿಗೆ ಎಡತಾಕಿ ವಿಚಾರಿಸಿದರೂ ‘ಯಾವುದೇ ಜಮೆಯಾಗಿಲ್ಲ’ ಎಂಬ ಉತ್ತರ ಬರುತ್ತಿದೆ.  ಜೀವನ ನಿರ್ವಹಣೆ, ಔಷಧಿಗಳಿಗಾಗಿ ಇದೇ ಹಣವನ್ನು ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದೇವೆ. ಯಾರನ್ನು ಕೇಳಬೇಕೋ ಗೊತ್ತಾಗುತ್ತಿಲ್ಲ’ ಎಂದು ಸಂತ್ರಸ್ತ ಫಲಾನುಭವಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ADVERTISEMENT

ಮೃತ ಫಲಾನುಭವಿಗಳೂ ಸೇರಿದಂತೆ ಕೆಲವರನ್ನು ಪಟ್ಟಿಯಿಂದ ತೆಗೆದು, ಹೊಸ ಫಲಾನುಭವಿಗಳನ್ನು ಸೇರ್ಪಡೆ ಮಾಡಿ ಆಯಾ ತಿಂಗಳು ಪಟ್ಟಿ ಪರಿಷ್ಕರಿಸಲಾಗುತ್ತದೆ. ಅದಕ್ಕಾಗಿ ಪ್ರತಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಇಂತಹ ಕಾರ್ಯಗಳನ್ನು ಮಾಡುವಾಗ ತಹಶೀಲ್ದಾರ್ ಕಚೇರಿಗಳಲ್ಲೇ ವಿಳಂಬವಾಗುತ್ತಿದೆ ಎನ್ನುವ ದೂರುಗಳೂ ಇವೆ. 

‘ಪ್ರತಿ ತಾಲ್ಲೂಕು ಕಚೇರಿಯಿಂದಲೂ ಪಟ್ಟಿ ಪರಿಷ್ಕರಣೆ ನಂತರ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಕಳುಹಿಸುತ್ತಾರೆ. ಕೆಲ ತಾಲ್ಲೂಕು ಅಥವಾ ಜಿಲ್ಲೆಗಳಿಂದ ಬರುವ ಪಟ್ಟಿ ವಿಳಂಬವಾದರೆ, ಅವುಗಳನ್ನು ಬಿಟ್ಟು ಉಳಿದ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಹಾಗೆ ಕೈಬಿಟ್ಟವರಿಗೆ ಮುಂದಿನ ಎರಡು ತಿಂಗಳ ಪಿಂಚಣಿ ಸೇರಿಸಿ ಕೊಡಲಾಗುತ್ತದೆ. ಇದು ವಿಳಂಬಕ್ಕೆ ಮೂಲ ಕಾರಣ ಎನ್ನುತ್ತಾರೆ’ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

‘ನಿಯಮದಂತೆ ಪ್ರತಿ ಬಾರಿಯೂ ಪಟ್ಟಿ ಪರಿಷ್ಕರಿಸಿದಾಗ ಕೆಲವರು ಯೋಜನೆಯಿಂದ ಹೊರಗೆ ಉಳಿಯುತ್ತಾರೆ. ಉದಾ: ವಿಧವಾ ವೇತನ ಪಡೆಯುತ್ತಿರುವ ಮಹಿಳೆಯ ಪುತ್ರನಿಗೆ 18 ವರ್ಷ ತುಂಬಿದರೆ ಅವರಿಗೆ ಪಿಂಚಣಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ. ನಿಯಮಗಳ ಕುರಿತು ಮಾಹಿತಿ ಇಲ್ಲದೇ ಇಂಥವರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುತ್ತಾರೆ. ಗ್ರಾಮಮಟ್ಟದಲ್ಲೇ ಇಂಥವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಸರಿಯಾಗಿ ಆಗುತ್ತಿಲ್ಲ’ ಎಂದು ಅವರು ಹೇಳಿದರು. 

ಸರ್ಕಾರ ನಿಗದಿತವಾಗಿ ಹಣ ಬಿಡುಗಡೆ ಮಾಡದಿದ್ದಾಗಲೂ ಕೆಲವೊಮ್ಮೆ ವಿಳಂಬವಾಗುತ್ತದೆ. ಕೋವಿಡ್‌ ಸಮಯದಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಉಳಿದಂತೆ ಹಣಕಾಸಿನ ಸಮಸ್ಯೆ ಎದುರಾಗಿಲ್ಲ ಎಂದೂ ವಿವರ ನೀಡಿದರು.

ಮೊದಲು ಯೋಜನೆಗಳ ಫಲಾನುಭವಿಗಳಿಗೆ ಅಂಚೆ ಕಚೇರಿ ಮೂಲಕವೂ ಹಣ ವಿತರಣೆಯಾಗುತ್ತಿತ್ತು. ಖಜಾನೆ 1 ಹಾಗೂ ಖಜಾನೆ 2 ಜಾರಿಗೆ ಬಂದ ನಂತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಫಲಾನುಭವಿಗಳು ತಮ್ಮ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಜೋಡಿಸಬೇಕಿದೆ. ಎರಡು ವರ್ಷಗಳ ಹಿಂದೆಯೇ ಈ ನಿಯಮ ಜಾರಿಯಾದರೂ ಇಂದಿಗೂ 2 ಲಕ್ಷಕ್ಕೂ ಹೆಚ್ಚು ಜನರು ಆಧಾರ್‌ ಸಂಖ್ಯೆ ಜೋಡಿಸಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.