ADVERTISEMENT

ಹೊಯ್ಸಳರ ಕಾಲದ ವಿಗ್ರಹ ಪತ್ತೆ

ಹಾಗಲವಾಡಿ: ಕೆರೆ ಹೂಳೆತ್ತುವಾಗ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 20:21 IST
Last Updated 20 ಏಪ್ರಿಲ್ 2021, 20:21 IST
ಹಾಗಲವಾಡಿ ಕೆರೆಯಲ್ಲಿ ದೊರೆತ ವಿಗ್ರಹ
ಹಾಗಲವಾಡಿ ಕೆರೆಯಲ್ಲಿ ದೊರೆತ ವಿಗ್ರಹ   

ಹಾಗಲವಾಡಿ: ಗ್ರಾಮದ ಕೆರೆಯ ಹೂಳು ಎತ್ತುವಾಗ ಮಂಗಳವಾರ ಹೊಯ್ಸಳರ ಕಾಲದ ಬೂದುಬಳಪದ ಕಲ್ಲಿನಪುರಾತನ ವಿಗ್ರಹವೊಂದು ದೊರೆತಿದೆ.

ಮಣ್ಣು ಅಗೆಯುವ ಯಂತ್ರಗಳಿಂದ ಕೆರೆಯ ಹೂಳು ಎತ್ತುವಾಗ ಅಂದಾಜು ಎಂಟು ಅಡಿ ಆಳದಲ್ಲಿ ಈ ವಿಗ್ರಹದೊರೆತಿದೆ. ವಿಗ್ರಹದ ಎರಡೂ ಕೈಗಳು ತುಂಡಾಗಿದ್ದು,ತುಂಡಾದ ಒಂದು ಸ್ಥಳದಲ್ಲಿಯೇ ಸಿಕ್ಕಿದೆ. ಉಳಿದಂತೆ ವಿಗ್ರಹ ಸುಸ್ಥಿತಿಯಲ್ಲಿದ್ದು, ಸುಂದರವಾಗಿದೆ.

ನಿಂತಿರುವ ಭಂಗಿಯಲ್ಲಿರುವ ಈ ಸುಂದರ ವಿಗ್ರಹ ನಾಲ್ಕೂವರೆ ಅಡಿ ಉದ್ದ ಮತ್ತು ಎರಡೂವರೆ ಅಡಿ ಅಗಲವಿದ್ದು,ಭುಜಬಲ, ಕಾಲು ಮತ್ತು ಕೈಗಡಗಳಅಲಂಕೃತವಾಗಿದೆ.

ADVERTISEMENT

ವಿಗ್ರಹದ ಸುತ್ತಲೂ ಸುರುಳಿ ಆಕಾರದ ಪ್ರಭಾವಳಿ ಇದ್ದು, ಕೆಳಪೀಠದ ಅಕ್ಕಪಕ್ಕ ಭೂದೇವಿ, ಶ್ರೀದೇವಿಯರು ಛತ್ರಿ, ಚಾಮರ ಹಿಡಿದು ನಿಂತಿದ್ದಾರೆ. ಕೆಳಪೀಠದಲ್ಲಿ ಆಕರ್ಷಕ ದಶಾವತರಗಳಸುಂದರ ಕೆತ್ತನೆ ಕಣ್ಮನ ಸೆಳೆಯುತ್ತದೆ.

ಇದು ಜನಾರ್ಧನ/ಚನ್ನಕೇಶವನ ವಿಗ್ರಹವಾಗಿರಬಹುದು ಎಂದು ಗುಬ್ಬಿ ತಾಲ್ಲೂಕು ಇತಿಹಾಸ ಮತ್ತು ಪುರಾತತ್ವಗಳ ಬಗ್ಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಅಧ್ಯಯನ ನಡೆಸುತ್ತಿರುವ ಶ್ರೀನಿವಾಸ್‌ ಅಭಿಪ್ರಾಯಪಟ್ಟಿದ್ದಾರೆ.

ಹೋಯ್ಸಳರ ಕಾಲದಲ್ಲಿ ನಾಯಕ ಪಾಳೇಗಾರರ ಮನೆತನದ ಆಳ್ವಿಕೆಗೆ ಒಳಪಟ್ಟಿದ್ದ ಹಾಗಲವಾಡಿ ಗ್ರಾಮದಲ್ಲಿ ಕೋಟೆ ಕೊತ್ತಲ, ದೇವಸ್ಥಾನ ಗಳಿಗೆ ಲೆಕ್ಕವಿಲ್ಲ ಎಂದು ಸ್ಥಳ ಇತಿಹಾಸ ಹೇಳುತ್ತದೆ.

ಗ್ರಾಮದ ಹಳೆಯ ದೇವಾಲಯದ ಬಳಿ ವಿಗ್ರಹ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲು ಗ್ರಾಮಸ್ಥರು ತೀರ್ಮಾನಿಸಿ
ದ್ದಾರೆ. ವಿಗ್ರಹದ ಬಗ್ಗೆ ಮೈಸೂರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.