ಹುಬ್ಬಳ್ಳಿ: 'ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಹೋರಾಟ ನಡೆಸಿದವರು ಗೂಂಡಾಗಳಾಗಿರಲಿಲ್ಲ. ಅವರ ಮೇಲೆ ಸರ್ಕಾರ ನಡೆಸಿದ ದೌರ್ಜನ್ಯ ಖಂಡನೀಯ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪೊಲೀರು ಲಾಠಿ ಬೀಸಿದ್ದಾರೆ ಎಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರೇ ಅದಕ್ಕೆ ಬಾಧ್ಯಸ್ಥರು' ಎಂದು ಆರೋಪಿಸಿದರು.
'ಹೋರಾಟದ ವಿಚಾರವಾಗಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಅರವಿಂದ ಬೆಲ್ಲದ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ನನಗೆ ಕರೆ ಮಾಡಿದ್ದರು. ನನಗೆ ಬಂದಿರುವ ಮಾಹಿತಿ ಪ್ರಕಾರ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದರು. ಆ ವೇಳೆ ಪೊಲೀಸರು ಕನಿಷ್ಠ ಬಲಪ್ರಯೋಗ ಮಾಡಬಹುದಿತ್ತು. ಆದರೆ, ಗರಿಷ್ಠ ಬಲ ಪ್ರಯೋಗ ಮಾಡಿ ಶತ್ರುಗಳ ಹಾಗೆ ವರ್ತಿಸಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಕೋವಿಡ್ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ನಾವು ಹೆದರಿಲ್ಲ ಎಂದ ತಕ್ಷಣ ಪ್ರಕರಣ ದಾಖಲಿಸಿ ತನಿಖೆ ಎನ್ನುತ್ತ ಯಾರ್ಯಾರದ್ದೋ ಹೆಸರು ಹೇಳುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸುಧಾಕರ್ ಹಾಗೂ ಬೊಮ್ಮಾಯಿ ಹೆಸರು ಸಹ ಹೇಳುತ್ತಿದ್ದಾರೆ. ಇವರೆಲ್ಲ ಮಾನಿಹಾನಿ ಪ್ರಕರಣ ದಾಖಲಿಸುವಂತಾಗಬೇಕು' ಎಂದು ಕಿಡಿಕಾರಿದರು.
ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಜೋಶಿ, 'ನಾವು ಶೀಘ್ರವೇ ಕಾಯ್ದೆಗೆ ತಿದ್ದುಪಡಿ ತಂದು, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುತ್ತೇವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.