ಹುಬ್ಬಳ್ಳಿ: ಕೊರೊನಾ ಸಂಕಷ್ಟದ ಕಾಲದಲ್ಲೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ್ದಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದ್ದರಿಂದ ತೆರಿಗೆ ಕಡಿಮೆ ಮಾಡಿ ಪಾಲಿಕೆ ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಿದ್ದು, ಪಾಲಿಕೆಯ ಎಲ್ಲ ಆಸ್ತಿ ತೆರಿಗೆಯಲ್ಲಿ ಶೇ 5ರಷ್ಟು ಕಡಿಮೆ ಮಾಡಲಾಗಿದೆ. ಪರಿಷ್ಕೃತ ಆದೇಶ ಮೇ 25ರಿಂದ ಅನ್ವಯವಾಗಲಿದೆ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದ್ದಾರೆ. ಇದೇ ವರ್ಷದ ಮಾರ್ಚ್ 10ರಂದೇ ಸರ್ಕಾರ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿತ್ತು. ಆ ಆದೇಶವನ್ನೇ ಈಗ ಜಾರಿಗೆ ತರಲಾಗಿತ್ತು ಎಂದು ಅವರು ಹೇಳಿದರು.
ಇತ್ತೀಚಿಗೆ ಹೆಚ್ಚಳ ಮಾಡಿದ್ದ ತೆರಿಗೆಗೆ ವಾಣಿಜ್ಯ ಕಟ್ಟಡಗಳಿಗೆ ಶೇ 25, ವಸತಿ ಗೃಹ ಶೇ 20 ಮತ್ತು ಖಾಲಿ ನಿವೇಶನಗಳಿಗೆ ತೆರಿಗೆಯನ್ನು ಶೇ 30ಕ್ಕೆ ಏರಿಸಲಾಗಿತ್ತು. ಇದನ್ನು ಹಲವಾರು ಜನ ವಿರೋಧಿಸಿದ್ದರು.
ಮಹಾನಗರ ಪಾಲಿಕೆ ಮೇ 31ರ ವೇಳೆಗೆ ₹20 ಕೋಟಿ ತೆರಿಗೆ ಸಂಗ್ರಹದ ನಿರೀಕ್ಷೆ ಹೊಂದಿದೆ. ಹೋದ ವರ್ಷ ಏಪ್ರಿಲ್ ಹಾಗೂ ಮೇ ವೇಳೆಗೆ ₹25 ಕೋಟಿ ಸಂಗ್ರಹವಾಗಿತ್ತು.
‘ಪಾಲಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೆರಿಗೆ ಸಂಗ್ರಹ ವೇಗವಾಗಿ ಆಗಬೇಕಾದ ಅನಿವಾರ್ಯತೆಯಿದೆ. ಸಿಬ್ಬಂದಿ ವೇತನಕ್ಕೆ ಪ್ರತಿ ತಿಂಗಳು ₹6 ಕೋಟಿ, ವಾಹನಗಳ ನಿರ್ವಹಣೆ, ಇಂಧನ ಮತ್ತು ಇತರ ಕಾರ್ಯಗಳಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಇದರಲ್ಲಿ ಶೇ 70ರಷ್ಟು ಹಣ ವಿವಿಧ ಯೋಜನೆಗಳ ಮೂಲಕ ಸರ್ಕಾರ ನೀಡುತ್ತದೆ. ಉಳಿದ ಶೇ 30ರಷ್ಟು ಹಣವನ್ನು ಪಾಲಿಕೆಯೇ ಹೊಂದಿಸಬೇಕಾಗುತ್ತದೆ’ ಎಂದು ಇಟ್ನಾಳ ತಿಳಿಸಿದರು.
ತೆರಿಗೆ ಸಂಬಂಧಿತ ಪ್ರಮುಖ ಮಾಹಿತಿಗಳು
* ಪರಿಷ್ಕರಿಸಿದ ತೆರಿಗೆ ನಿಯಮ ಮೇ 25ರಿಂದ (ಸೋಮವಾರ) ಜಾರಿಗೆ ಬರಲಿದೆ.
* ಅವಳಿ ನಗರದಲ್ಲಿ ಆಸ್ತಿ ತೆರಿಗೆ ಪಾವತಿಸುವ ತೆರಿಗೆದಾರರು 2.59 ಲಕ್ಷ
* ಈಗಾಗಲೇ ತೆರಿಗೆ ಕಟ್ಟಿದವರು ಹಣವನ್ನು ಮುಂದಿನ ವರ್ಷದ ತೆರಿಗೆಯಲ್ಲಿ ಸರಿದೂಗಿಸುವ ಭರವಸೆ
* 2021–21ರಲ್ಲಿ ತೆರಿಗೆ ಸಂಗ್ರಹವಾಗಿ ನಿರೀಕ್ಷೆ ಇರುವುದು ಅಂದಾಜು ₹83 ಕೋಟಿ
* 2019–20ರಲ್ಲಿ ಆಸ್ತಿ ಕರ ಸಂಗ್ರಹದ ನಿರೀಕ್ಷೆ ಇದ್ದದ್ದು ₹72 ಕೋಟಿ. ಸಂಗ್ರಹವಾಗಿದ್ದು ₹57 ಕೋಟಿ.
* 44,558 ಜನ ಈಗಾಗಲೇ ತೆರಿಗೆ ಪಾವತಿಸಿದ್ದಾರೆ
* ಇದುವರೆಗೆ ಸಂಗ್ರಹವಾದ ಆಸ್ತಿ ತೆರಿಗೆ ಒಟ್ಟು ₹13.23 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.