ADVERTISEMENT

ಗಲಭೆ: ಸಹಜ ಸ್ಥಿತಿಯತ್ತ ಹುಬ್ಬಳ್ಳಿ- ಆರೋಪಿಗಳಿಗೆ ಏ. 30ರವರೆಗೆ ನ್ಯಾಯಾಂಗ ಬಂಧನ

ಆರೋಪಿಗಳಿಗೆ ಏ. 30ರವರೆಗೆ ನ್ಯಾಯಾಂಗ ಬಂಧನ; ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕೋರ್ಟ್‌ಗೆ ಹಾಜರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 5:45 IST
Last Updated 19 ಏಪ್ರಿಲ್ 2022, 5:45 IST
ಹುಬ್ಬಳ್ಳಿಯಲ್ಲಿ ಗಲಭೆ ನಡೆದ ಇಂಡಿ ಪಂಪ್ ವೃತ್ತದಲ್ಲಿ ಸೋಮವಾರ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ವಾಹನಗಳ ಸಂಚಾರ ಸರಾಗವಾಗಿತ್ತು – ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಗಲಭೆ ನಡೆದ ಇಂಡಿ ಪಂಪ್ ವೃತ್ತದಲ್ಲಿ ಸೋಮವಾರ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ವಾಹನಗಳ ಸಂಚಾರ ಸರಾಗವಾಗಿತ್ತು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ವಿವಾದಾತ್ಮಕ ವಾಟ್ಸ್‌ಆ್ಯಪ್ ಸ್ಟೇಟಸ್‌ನಿಂದಾಗಿ ಉದ್ವಿಗ್ನಗೊಂಡಿದ್ದ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಈಗ ತಣ್ಣಗಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಗಲಭೆ ನಡೆದಿದ್ದ ಹಳೇ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದ್ದ ಅಘೋಷಿತ ಬಂದ್‌ ವಾತಾವರಣ ಸಂಪೂರ್ಣ ತಿಳಿಯಾಗಿದ್ದು, ನಗರ ದಾದ್ಯಂತ ಸೋಮವಾರ ವ್ಯಾಪಾರ– ವಹಿವಾಟು ಎಂದಿನಂತೆ ನಡೆಯಿತು.

ಜನನಿಬಿಡ ಇಂಡಿ ಪಂಪ್ ವೃತ್ತ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಅಂಗಡಿ ಮಳಿಗೆಗಳು ತೆರೆದಿದ್ದವು. ವಾಹನಗಳ ಸಂಚಾರವು ಎಂದಿನಂತಿತ್ತು. ವೃತ್ತಕ್ಕೆ ಹೊಂದಿಕೊಂಡಂತಿರುವ ಫತೇಶಾವಲಿ ದರ್ಗಾಕ್ಕೆ ಬರುವವರ ಸಂಖ್ಯೆಯಲ್ಲೂ ವ್ಯತ್ಯಾಸವಿರಲಿಲ್ಲ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಘಟನಾ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ನಾಗರಿಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೊಗಳನ್ನು ಆಧರಿಸಿ ಸೋಮವಾರ ಇನ್ನೂ 15 ಮಂದಿಯನ್ನು ಬಂಧಿಸಿದ್ದು, ಗಲಭೆಯಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ.

ADVERTISEMENT

ಮತ್ತೆ 5 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಘಟನೆ ಸಂಬಂಧ ಒಟ್ಟು 12 ಎಫ್‌ಐಆರ್‌ಗಳು ದಾಖಲಾದಂತಾಗಿದೆ. ಪೊಲೀಸರು ಮತ್ತಷ್ಟು ಶಂಕಿತರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ನ್ಯಾಯಾಂಗ ಬಂಧನ: ವಿವಾದಾತ್ಮಕ ಅನಿಮೇಟೆಡ್ ವಿಡಿಯೊವನ್ನು ವಾಟ್ಸ್‌ ಆ್ಯ‌ಪ್ ಸ್ಟೇಟಸ್‌ ಹಾಕಿಕೊಂಡಿದ್ದ ಆರೋಪಿ ಅಭಿಷೇಕ ಹಿರೇಮಠ ಹಾಗೂ ನಂತರ ನಡೆದ ಗಲಭೆಯ 88 ಆರೋಪಿಗಳಿಗೆ ಇಲ್ಲಿನ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಏ. 30ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಸೋಮವಾರ ಆದೇಶ ಹೊರಡಿಸಿದೆ.

ಆರೋಪಿಗಳನ್ನು ಇರಿಸಿದ್ದ ಧಾರವಾಡದ ಕೇಂದ್ರ ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಬಂಧಿತ ಅಭಿಷೇಕನನ್ನು ಮಾತ್ರ ಕೋರ್ಟ್‌ಗೆ ನೇರವಾಗಿ ಹಾಜರುಪಡಿಸಿದರು.

ಆರೋಪಿ ಸದ್ಯ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿದ್ದಾನೆ. ಆತನ ಪರ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಮಂಗಳವಾರ ಸರ್ಕಾರಿ ವಕೀಲರಿಂದ ತಕರಾರು ಅರ್ಜಿ ಸಲ್ಲಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಲಭೆ ಆರೋಪಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ 307), ಸರ್ಕಾರ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು (ಐಪಿಸಿ 353) ಸೇರಿದಂತೆ 12 ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

16 ಮಂದಿ ಬಿಡುಗಡೆ: ‘ಘಟನೆ ಸಂಬಂಧ ವಶಕ್ಕೆ ಪಡೆದಿದ್ದವರ ಪೈಕಿ, 88 ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಗಲಭೆಯಲ್ಲಿ ಪಾತ್ರವಿಲ್ಲದ 16 ಮಂದಿಯನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಲಾಭೂ ರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿವಾದಾತ್ಮಕ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ ಯುವಕನ ಬಂಧನಕ್ಕೆ ಒತ್ತಾಯಿಸಿ, ಏ. 16ರಂದು ರಾತ್ರಿ ಉದ್ರಿಕ್ತರ ಗುಂಪು ಗಲಭೆ ನಡೆಸಿತ್ತು. ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿತ್ತು. ಘಟನೆಯಲ್ಲಿ 12 ಪೊಲೀಸರು ಗಾಯಗೊಂಡಿದ್ದರು.

ಎಡಿಜಿಪಿ ಸರಣಿ ಸಭೆ: ಅಪರಾಧ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಹಳೇ ಹುಬ್ಬಳ್ಳಿ ಠಾಣೆಗೆ ಭೇಟಿ ನೀಡಿ, ಪ್ರಕರಣದ ಮಾಹಿತಿ ಪಡೆದರು. ಪೊಲೀಸ್ ಕಮಿಷನರ್ ಲಾಭೂ ರಾಮ್ ಮತ್ತು ಡಿಸಿಪಿಗಳು ತನಿಖಾ ತಂಡಗಳ ಜೊತೆ ಸರಣಿ ಸಭೆ ನಡೆಸಿದರು.

ಕಾಂಗ್ರೆಸ್‌ ನಿಯೋಗ ಭೇಟಿ: ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ, ಮೇಲ್ಮನೆ ಸದಸ್ಯ ಸಲೀಂ ಅಹಮದ್ ಹಾಗೂ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಯೂಸುಫ್‌ ಸವಣೂರ ಮತ್ತು ಉಪಾಧ್ಯಕ್ಷ ಅಲ್ತಾಫ್‌ ಕಿತ್ತೂರ ಅವರಿದ್ದ ನಿಯೋಗವು ಅಪರಾಧ ವಿಭಾಗದ ಎಡಿಜಿಪಿ ಹಾಗೂ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿತು. ತಪ್ಪಿತಸ್ಥರನ್ನು ಮಾತ್ರ ಬಂಧಿಸಬೇಕು ಎಂದು ಕೋರಿತು.

ಅಮಾಯಕರೆಂದು ಹೇಗೆ ಹೇಳುವಿರಿ?: ಜೋಶಿ
‘ಬಂಧಿತ ಆರೋಪಿಗಳನ್ನು ಅಮಾಯಕರು ಎಂದುತನಿಖೆಗೂ ಮುಂಚೆಯೇ ಹೇಗೆ ಹೇಳುವಿರಿ? ಆ ವಿಷಯ ಹೇಗೆ ಗೊತ್ತಾಯಿತು?’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.

‘ಅಮಾಯಕರನ್ನು ಬಂಧಿಸಲಾಗಿದೆ’ ಎಂದು ತನಿಖೆಗೂ ಮೊದಲೇ ಪೊಲೀಸರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ನಿಜಕ್ಕೂ ಅಮಾಯಕರನ್ನು ಬಂಧಿಸಿದ್ದರೆ, ಬಿಡುವುದಾಗಿ ಪೊಲೀಸರು ಸಹ ಹೇಳಿದ್ದಾರೆ’ ಎಂದರು.

ಕಾಣದ ಕೈಗಳ ಕೈವಾಡ: ಸಲೀಂ
‘ಗಲಭೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಸರ್ಕಾರ ಮತ್ತು ಗುಪ್ತಚರದ ವೈಫಲ್ಯವೇ ಇದಕ್ಕೆ ಕಾರಣ. ರಾಜ್ಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಅವರ ಪಕ್ಷದವರೇ ಟೀಕೆ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು, ‘ಗಲಭೆಗೆ ಕಾರಣವಾದ ವಿಡಿಯೊ ಪೋಸ್ಟ್‌ ಮಾಡಿಸಿದವರು ಯಾರು? ಇದರ ಹಿಂದೆ ಯಾರಿದ್ದಾರೆ? ಎನ್ನುವುದರ ಬಗ್ಗೆ ತನಿಖೆಯಾಗಬೇಕು. ಗಲಭೆ ಮತ್ತು ಕಲ್ಲು ತೂರಾಟದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಕೆಲವರು ಮುಖ ಮುಚ್ಚಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.