ADVERTISEMENT

ಹುಣಸೋಡು ದುರ್ಘಟನೆಯಲ್ಲಿ ಮಗ ಮೃತ; ತಂದೆ ಸುರಕ್ಷಿತ

ಹುಣಸೋಡು ಸ್ಫೋಟ: ವಾಹನ ಚಾಲಕರು, ಕಾರ್ಮಿಕರಿಗೆ ಅಕ್ರಮ ದಂಧೆಯಲ್ಲೇ ಅಧಿಕ ಸಂಭಾವನೆ

ಚಂದ್ರಹಾಸ ಹಿರೇಮಳಲಿ
Published 24 ಜನವರಿ 2021, 17:16 IST
Last Updated 24 ಜನವರಿ 2021, 17:16 IST
ಹುಣಸೋಡು ದುರ್ಘಟನೆ
ಹುಣಸೋಡು ದುರ್ಘಟನೆ    

ಶಿವಮೊಗ್ಗ: ಹುಣಸೋಡು ಸ್ಫೋಟದಲ್ಲಿ ಮೃತಪಟ್ಟ ಜಾವೀದ್‌ ಅವರ ತಂದೆ ಮೊಹಮದ್‌ ಇಕ್ಬಾಲ್‌ ಹಲವು ದಶಕ ಗಳಿಂದ ಕಲ್ಲುಕ್ವಾರಿಗಳಲ್ಲಿ ಸ್ಫೋಟಕಗಳನ್ನು ಅಳವಡಿಸಿ, ಬಂಡೆ ಸಿಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅದೇ ವೃತ್ತಿ ಅವರ ಮಗನನ್ನು ಬಲಿ ತೆಗೆದುಕೊಂಡಿದೆ.

ಮೂಲತಃ ಆಂಧ್ರಪ್ರದೇಶದ ರಾಯಘಡದ ಇಕ್ಬಾಲ್‌ ತನ್ನಂತೆ ತನ್ನ ಮಗನನ್ನೂ ಅದೇ ವೃತ್ತಿಯಲ್ಲಿ ತೊಡಗಿಸಿದ್ದರು. ಸ್ಫೋಟಕಗಳನ್ನು ತುಂಬಿದ್ದ ಲಾರಿಯನ್ನು ಅವರ ಪುತ್ರ ಚಲಾಯಿಸಿಕೊಂಡು ಬಂದಿದ್ದ. ಹುಣಸೋಡಿನ ಎಸ್‌.ಎಸ್‌. ಕ್ವಾರಿಯಲ್ಲಿ ಸ್ಫೋಟ ಸಂಭವಿಸುವ ಮೊದಲು ಭದ್ರಾವತಿಯ ಶಶಿ ತಂದಿದ್ದ ಜೀಪ್‌ಗೆ ಜಿಲೆಟಿನ್‌ ಮತ್ತಿತರ ಸಾಮಗ್ರಿ ತುಂಬಿಸಿ, ಕಳುಹಿಸಿಕೊಟ್ಟ ನಂತರ ಇಕ್ಬಾಲ್‌ ಊಟ ಮಾಡಲು ತೆರಳಿದ್ದರು. ಅದೇ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು, ಆ ಕ್ಷಣವೇ ಪುತ್ರ ಸೇರಿ ತಮ್ಮ ಜತೆಗೆ ಬಂದಿದ್ದಪವನ್ ಕುಮಾರ್‌, ಚೆಲಿಮಾನು ರಾಜು ಸಹ ಬಾರದ ಲೋಕಕ್ಕೆ ತೆರಳಿರುವ ಸತ್ಯ ಅವರಿಗೆ ಖಚಿತವಾಗಿತ್ತು. ಈ ಎಲ್ಲ ವಿಷಯ ಕುರಿತು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಭದ್ರಾವತಿಯ ಮೂವರು ಸುರಕ್ಷಿತ: ಸ್ಫೋಟದಲ್ಲಿ ಮೃತಪಟ್ಟ ಭದ್ರಾವತಿ ತಾಲ್ಲೂಕು ಅಂತರಗಂಗೆಯ ಪ್ರವೀಣ್, ಮಂಜುನಾಥ್ ಅವರ ಜತೆ ಮತ್ತೊಂದು ಜೀಪ್‌ನಲ್ಲಿ ಬಂದಿದ್ದ ಅವರ ಸ್ನೇಹಿತರಾದ ಶಶಿ, ಬಸವರಾಜ್, ನಾಗರಾಜ್ ನಾಪತ್ತೆಯಾಗಿದ್ದು, ಅವರ ಪತ್ತೆ ಕಾರ್ಯವೂ ನಡೆದಿತ್ತು. ಮೂವರೂ ತಮ್ಮ ಪೋಷಕರಿಗೆ ಕರೆ ಮಾಡಿ ಸುರಕ್ಷಿತವಾಗಿರುವ ವಿಷಯ ತಿಳಿಸಿದ್ದಾರೆ. ಸ್ಫೋಟಕ್ಕೂ 10 ನಿಮಿಷ ಮೊದಲು ಸ್ಫೋಟಕ ಗಳನ್ನು ತುಂಬಿಕೊಂಡು ಅಲ್ಲಿಂದ ನಿರ್ಗಮಿಸಿರುವ ವಿಷಯ ಬೆಳಕಿಗೆ ಬಂದಿದೆ. ಮೃತ ಪ್ರವೀಣ್, ಮಂಜುನಾಥ್ ಸೇರಿ ಎಲ್ಲರೂ ಹಲವು ವರ್ಷಗಳಿಂದ ಭದ್ರಾವತಿ ತಾಲ್ಲೂ ಕಿನ ಕ್ವಾರಿಗಳಲ್ಲಿ ಬಂಡೆಗಳನ್ನು ಸಿಡಿಸುವ ಕೆಲಸದಲ್ಲೇ ತೊಡಗಿಸಿಕೊಂಡಿದ್ದರು. ಅಂದು ಸ್ಫೋಟಕ ಸಾಮಗ್ರಿ ತೆಗೆದು ಕೊಂಡು ಹೋಗಲು ಹುಣಸೋಡಿಗೆ ಬಂದಿದ್ದರು ಎನ್ನುವ ಸತ್ಯವೂ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ADVERTISEMENT

ಅಕ್ರಮ ದಂಧೆಯಲ್ಲೇ ಅಧಿಕ ಸಂಭಾವನೆ: ಸರಕು ಸಾಗಣೆ ಲಾರಿಗಳಿಗೆ ಚಾಲಕರಾಗಿ ಹೋದರೆ ದಿನಕ್ಕೆ ಹೆಚ್ಚೆಂದರೆ ₹ 1 ಸಾವಿರ ದುಡಿಯಬಹುದು. ಆದರೆ, ಸ್ಫೋಟಕಗಳನ್ನು ಸಾಗಿಸುವ ವಾಹನಗಳಲ್ಲಿ ಕೆಲಸ ಮಾಡಿದರೆ ದಿನಕ್ಕೆ ₹ 3 ಸಾವಿರದವರೆಗೂ ಸಂಭಾವನೆ ಸಿಗುತ್ತಿತ್ತು. ಈ ಕಾರಣಕ್ಕಾಗಿಯೇ ಇಕ್ಬಾಲ್‌ ಅರ್ಧಕ್ಕೆ ಶಾಲೆ ಬಿಟ್ಟಿದ್ದ ಮಗನನ್ನೂ ಇದೇ ವೃತ್ತಿಗೆ ಪರಿಚಯಿಸಿದ್ದರು ಎನ್ನುವ ಅಂಶವೂ ತಿಳಿದುಬಂದಿದೆ.

ಸಜೀವ ಸ್ಫೋಟಕಗಳು ಪತ್ತೆ: ಘಟನೆ ನಡೆದ ಎರಡು ದಿನಗಳ ನಂತರ ಸ್ಫೋಟವಾದ ಸ್ಥಳದಿಂದ 150 ಮೀಟರ್ ಅಂತರದಲ್ಲಿ ಒಂದಷ್ಟು ಸಜೀವ ಸ್ಫೋಟಕಗಳು ಪತ್ತೆಯಾಗಿವೆ. ಡಿಟೊನೇಟರ್, ಜಿಲೆಟಿನ್ ಕಡ್ಡಿಗಳನ್ನು ಕಾಗದದಲ್ಲಿ ಸುತ್ತಿ ಇಡಲಾಗಿತ್ತು. ಅವುಗಳನ್ನು ಪತ್ತೆ ಹಚ್ಚಿದ ಬಾಂಬ್ ನಿಷ್ಕ್ರಿಯ ದಳ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದೆ.

ಕೊನೆಗೂ ಐವರ ವಿಳಾಸ ಪತ್ತೆ: ಘಟನೆ ನಡೆದ ಮೂರು ದಿನಗಳ ನಂತರ ಜಿಲ್ಲಾಡಳಿತ ಮೃತಪಟ್ಟ ಆರು ಜನರಲ್ಲಿ ಐವರ ವಿಳಾಸಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.

ಆಂಧ್ರಪ್ರದೇಶ ರಾಯದುರ್ಗದ ಪವನ್ ಕುಮಾರ್ (29), ಜಾವೀದ್, ಚೆಲಿಮಾನು ರಾಜು (24), ಭದ್ರಾವತಿ ತಾಲ್ಲೂಕು ಅಂತರಗಂಗೆಯ ಪ್ರವೀಣ್‌ (36), ಮಂಜುನಾಥ (35) ಗುರುತು ಪತ್ತೆಯಾದವರು. ಮತ್ತೊಂದು ಶವದ ಗುರುತು ಪತ್ತೆ ಸಾಧ್ಯವಾಗಿಲ್ಲ. ಗುರುತಿಸಲಾದ ಪಾರ್ಥಿವ ಶರೀರಗಳನ್ನು ವಾರಸುದಾರರಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾಹಿತಿ ನೀಡಿದರು.

‘ಸ್ಫೋಟಗಳು ನಡೆಯಲೆಂದು ಸಕ್ರಮ ಮಾಡಲು ಹೊರಟಿದ್ದೀರಾ?’

ಮದ್ದೂರು (ಮಂಡ್ಯ): ‘ಹುಣಸೋಡು ಸ್ಫೋಟದಂತಹ ದುರ್ಘಟನೆಗಳು ನಡೆಯುತ್ತಿರಲೆಂದು, ಅಕ್ರಮ ಗಣಿಗಾರಿಕೆಗಳನ್ನು ಸಕ್ರಮ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಹೊರಟಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

‘ಅಕ್ರಮ ಗಣಿಗಾರಿಕೆಗಳನ್ನು ಸಕ್ರಮ ಮಾಡಿಕೊಳ್ಳುವಂತೆ ಮಾಲೀಕರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಂದರೆ, ಮಾಲೀಕರು ಗಣಿಗಾರಿಕೆಯನ್ನು ಮುಂದುವರಿಸಲಿ. ಸ್ಫೋಟಗಳು ಸಂಭವಿಸಿ ಜನರು ಸಾಯಲೆಂಬುದು ನಿಮ್ಮ ಉದ್ದೇಶವೇ? ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಬೇಕು’ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ಮಾಲೀಕರು ಹಾಗೂ ಪಾಲುದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

‘ಅನೇಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗುತ್ತಿರುವುದು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಎತ್ತಿ ತೋರಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.