ADVERTISEMENT

₹100 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ

ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 20:01 IST
Last Updated 26 ಆಗಸ್ಟ್ 2022, 20:01 IST
ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾದ ಹೆರಾಯಿನ್ ಡ್ರಗ್ಸ್ ಪೊಟ್ಟಣ
ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾದ ಹೆರಾಯಿನ್ ಡ್ರಗ್ಸ್ ಪೊಟ್ಟಣ   

ಬೆಂಗಳೂರು: ವಿಮಾನದ ಮೂಲಕ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಅಂತರರಾಷ್ಟ್ರೀಯ ಜಾಲ ಭೇದಿಸಿರುವ ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ₹ 100 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಡ್ರಗ್ಸ್ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ 14 ಕೆ.ಜಿ ಪರಿಶುದ್ಧ ಹೆರಾಯಿನ್ ಜಪ್ತಿ ಮಾಡಲಾಗಿದೆ’ ಎಂದು ಡಿಆರ್‌ಐ ಮೂಲಗಳು ಹೇಳಿವೆ.

‘ಡ್ರಗ್ಸ್ ಸಾಗಿಸುತ್ತಿದ್ದ ಆರೋಪದಡಿ ತೆಲಂಗಾಣದ 45 ವರ್ಷದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕೃತ್ಯದ ಹಿಂದೆ ಅಂತರರಾಷ್ಟ್ರೀಯ ಜಾಲದ ಕೈವಾಡವಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

‘ಪರಿಶುದ್ಧ ಹೆರಾಯಿನ್‌ ಮಾದಕ ವಸ್ತುವನ್ನು ಇತರೆ ಡ್ರಗ್ಸ್‌ಗಳ ಜೊತೆ ಸೇರಿಸಿ ಮಾರಾಟ ಮಾಡಲಾಗುತ್ತದೆ. ಇದಕ್ಕೆ ಸಾವಿರದಿಂದ ಲಕ್ಷದವರೆಗೆ ಬೆಲೆ ಇದೆ. ಕಪ್ಪು ಬಣ್ಣದ ಪ್ಲಾಸ್ಟಿಕ್‌ ಒಳಗೆ ಹೆರಾಯಿನ್‌ ಬಚ್ಚಿಟ್ಟು, ಕಂದು ಬಣ್ಣದ ರಟ್ಟಿನ ಹೂದಿಕೆ ಹಾಕಲಾಗಿತ್ತು. ಈ ಪೊಟ್ಟಣವನ್ನು ಸೂಕ್ಷ್ಮ ವಸ್ತುವೆಂದು ಹೇಳಿಕೊಂಡು ವಿಮಾನ ಮೂಲಕ ಸಾಗಣೆ ಮಾಡಲು ಆರೋಪಿ ಹೊಂಚು ಹಾಕಿದ್ದ. ಡ್ರಗ್ಸ್ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದ. ಎರಡು ಪೊಟ್ಟಣಗಳಲ್ಲಿ ಡ್ರಗ್ಸ್ ಇತ್ತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.