ADVERTISEMENT

ಪ್ರತಿ ಪಾಲಿಕೆಗೆ ₹150ಕೋಟಿ ವಿಶೇಷ ಅನುದಾನ: ಸಚಿವ ಭೈರತಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 12:13 IST
Last Updated 8 ಜೂನ್ 2020, 12:13 IST
   

ಧಾರವಾಡ: ‘ರಾಜ್ಯದಲ್ಲಿರುವ ಹತ್ತು ಮಹಾನಗರ ಪಾಲಿಕೆಗಳಿಗೆ ತಲಾ ₹150 ಕೋಟಿ ವಿಶೇಷ ಅನುದಾನ ನೀಡುವ ಯೋಚನೆ ಇದ್ದು, ಇದಕ್ಕಾಗಿ ಮುಖ್ಯಮಂತ್ರಿ ಅವರಲ್ಲಿ ₹1500ಕೋಟಿ ಅನುದಾನ ಕೋರಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ತಿಳಿಸಿದರು.

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳ ಸಭೆಯನ್ನು ಸೋಮವಾರ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಂಗಳೂರಿನಂತೆ ರಾಜ್ಯದ ಇತರ ನಗರಗಳ ಅಭಿವೃದ್ಧಿಯೂ ಆಗಬೇಕು. ಇದಕ್ಕಾಗಿ ವಿಶೇಷ ಅನುದಾನಕ್ಕಾ ಬೇಡಿಕೆ ಇತ್ತು. ಅದನ್ನು ಈಡೇರಿಸಲು ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

‘ಆಸ್ತಿ ತೆರಿಗೆ ಸಂಗ್ರಹಿಸುತ್ತಿರುವುದು ರಾಜ್ಯದ ಬೊಕ್ಕಸ ತುಂಬಿಸಲು ಅಲ್ಲ. ಬದಲಿಗೆ ಆಯಾ ನಗರದ ತೆರಿಗೆ ಹಣವನ್ನು ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು. ಅದಕ್ಕಾಗಿಯೇ ಪರಿಷ್ಕೃತ ತೆರಿಗೆ ಹಣವನ್ನು ಭರಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಹಾಗೆಯೇ ನೀರು, ಕಂದಾಯ ಸೇರಿದಂತೆ ತೆರಿಗೆ ಬಾಕಿದಾರರಿಗೆ ಯಾವುದೇ ರಿಯಾಯಿತಿ ನೀಡುವುದಾಗಲೀ ಅಥವಾ ಒಂದು ಬಾರಿ ಭರಿಸುವ ಅವಕಾಶ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ತೆರಿಗೆ ಕಟ್ಟದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಸವರಾಜ, ‘ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆದರೆ ಅಲ್ಲಿನ ಕೆಲ ನ್ಯೂನತೆಗಳನ್ನು ಸರಿಪಡಿಸಲು ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.