ADVERTISEMENT

ಕಲಿತ ದಂಪತಿ ತಕರಾರು: ಮೊದಲ ರಾತ್ರಿಯೇ ಹೆಂಡತಿಯ ವರಾತ...!

ಕ್ರೌರ್ಯದ ಆರೋಪ ವಜಾ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 21:27 IST
Last Updated 17 ಆಗಸ್ಟ್ 2022, 21:27 IST
   

ಬೆಂಗಳೂರು: ‘ಗಂಡ ತನ್ನ ಹೆಂಡತಿಯ ಜೊತೆ ಸಂತಾನಕ್ಕಾಗಿ ಅಪೇಕ್ಷಿಸುವುದು, ಉನ್ನತ ವ್ಯಾಸಂಗಕ್ಕೆ ಉದ್ದೀಪಿಸುವುದು, ಜ್ಞಾನ, ತಿಳಿವಳಿಕೆಯ ವೃದ್ಧಿಗಾಗಿ ಭಾಷೆಯೊಂದನ್ನು ಕಲಿ ಎಂದು ಪ್ರೀತಿಯಿಂದ ಪ್ರೇರೇಪಿಸುವುದು ಕ್ರೌರ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇಂತಹದೊಂದು ದುಬಾರಿ ಭಾವನೆಗಳ ತಾಕಲಾಟದ ಕೌಟುಂಬಿಕ ವ್ಯಾಜ್ಯವೊಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ತನ್ನ ಗಂಡನ ವಿರುದ್ಧ ಹೆಂಡತಿ ದಾಖಲಿಸಿದ್ದ ಕ್ರೌರ್ಯದ ಆಪಾದನೆಗಳ ಕುರಿತಾದ ಅರ್ಜಿ ವಿಚಾರಣೆಯನ್ನು ರದ್ದುಗೊಳಿಸಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ವೈದ್ಯ ಮತ್ತು ಅವರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ,‘ಕುಟುಂಬ ವೃದ್ಧಿಯ ದೃಷ್ಟಿಯಿಂದ ಸ್ಪಷ್ಟ ಯೋಜನೆಯನ್ನು ಹಾಕಿಕೊಂಡು ಯಾವಾಗ ಮಗು ಮಾಡಿಕೊಳ್ಳಬೇಕು ಎಂದು ಗಂಡ ತನ್ನ ಹೆಂಡತಿಯ ಜೊತೆ ಚರ್ಚಿಸುವುದು ಕಿರುಕುಳವಾಗಲು ಹೇಗೆ ತಾನೇ ಸಾಧ್ಯ’ ಎಂದು ಪ್ರಶ್ನಿಸಿದೆ.

ADVERTISEMENT

ಪ್ರಕರಣವೇನು?: ಗಂಡ–ಹೆಂಡತಿ ಇಬ್ಬರೂ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು. ಮದುವೆಯ ನಂತರ ಹೆಂಡತಿ ಗಂಡನ ಕೆಲವು ವರ್ತನೆಗಳ ವಿರುದ್ಧ ವರಾತ ಆರಂಭಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಳು.

ವಿಚಾರಣಾ ನ್ಯಾಯಾಲಯ 2013ರ ಸೆಪ್ಟೆಂಬರ್ 7ರಂದು ನೀಡಿದ ಆದೇಶದಲ್ಲಿ ಗಂಡ ಮತ್ತು ಆತನ ತಾಯಿಗೆ ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ಮತ್ತು 4ರ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 498 ಎ ಮತ್ತು 34ರ ಅಡಿಯಲ್ಲಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು 2016ರ ಡಿಸೆಂಬರ್ 1ರಂದು ಸೆಷನ್ಸ್ ನ್ಯಾಯಾಲಯ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಗಂಡ ಮತ್ತು ಅವರ ತಾಯಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.