ಬೆಂಗಳೂರು: ರಾಯಚೂರಿನಲ್ಲಿರುವ ದೇಶದ ಏಕೈಕ ಪ್ರತಿಷ್ಠಿತ ‘ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್’ (ಎಚ್‌ಜಿಎಂಸಿಎಲ್) ಕಳೆದ 77 ವರ್ಷಗಳಲ್ಲಿ ದುಡಿದು, ನಿಶ್ಚಿತ ಠೇವಣಿ ಖಾತೆಗಳಲ್ಲಿ ಉಳಿತಾಯ ಮಾಡಿದ್ದ ₹1,200 ಕೋಟಿಯಲ್ಲಿ ₹1,000 ಕೋಟಿಯನ್ನು ‘ಸಂಯೋಜಿತ ಟೌನ್‌ಶಿಪ್’ ನಿರ್ಮಾಣಕ್ಕೆ ಬಳಕೆ ಮಾಡಲು ಮುಂದಾಗಿದೆ.
‘ಈ ರೀತಿ ₹1,000 ಕೋಟಿಯನ್ನು ಅನುತ್ಪಾದಕ ವೆಚ್ಚಕ್ಕೆ ಬಳಸುತ್ತಿರುವುದರಿಂದ ಹಟ್ಟಿ ಚಿನ್ನದ ಗಣಿ ಕಂಪನಿ ದಿವಾಳಿ ಆಗುತ್ತದೆ’ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ಪರಿಶೋಧನಾ ವರದಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಪ್ರಧಾನ ಮಹಾ ಲೇಖಪಾಲರು ಕಳೆದ ಜೂನ್ 27 ರಂದು ಎಚ್‌ಜಿಎಂಸಿಎಲ್‌ಗೆ ಹಲವು ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಕಂಪನಿಯು ವಿವಿಧ ಬ್ಯಾಂಕ್‌ಗಳ ನಿಶ್ಚಿತ ಠೇವಣಿಗಳಲ್ಲಿ ಇಟ್ಟಿರುವ ಮೊತ್ತ ₹850 ಕೋಟಿ. ಫ್ಲೆಕ್ಸಿ ಅಕೌಂಟ್ ಬ್ಯಾಲೆನ್ಸ್ ₹350 ಕೋಟಿ. ಹೀಗೆ ಒಟ್ಟು ₹1,200 ಕೋಟಿ ಇದೆ. ಇದರಲ್ಲಿ ₹998.50 ಕೋಟಿ ವೆಚ್ಚದಲ್ಲಿ 912 ಮನೆಗಳನ್ನು ಒಳಗೊಂಡ ಟೌನ್‌ಶಿಪ್ ನಿರ್ಮಾಣ ಮಾಡಿದರೆ, ಕಂಪನಿ ಬಳಿ ಉಳಿಯುವುದು ಕೇವಲ ₹211.50 ಕೋಟಿ’ ಎಂದು 2024 ರ ಮಾರ್ಚ್‌ಗೆ ಕೊನೆಗೊಂಡ ಕಂಪನಿಯ ವಿತ್ತೀಯ ಹೇಳಿಕೆ ತಿಳಿಸಿದೆ. ಇದು ಆಘಾತಕಾರಿ ಸಂಗತಿ ಎಂದು ಸಿಎಜಿ ವರದಿ ಬೊಟ್ಟು ಮಾಡಿದೆ.
‘ಸುಮಾರು 77 ವರ್ಷಗಳ ಶ್ರಮದ ಕಾರಣ ಇಷ್ಟು ಮೊತ್ತ ಉಳಿತಾಯ ಮಾಡಲು ಸಾಧ್ಯವಾಗಿದೆ. ₹998.50 ಕೋಟಿ ಅಂದರೆ ನಿಶ್ಚಿತ ಠೇವಣಿಯಲ್ಲಿನ ಶೇ 83.21 ರಷ್ಟು ಮೊತ್ತ ಅನುತ್ಪಾದಕ ಉದ್ದೇಶಕ್ಕೆ (ಟೌನ್‌ಶಿಪ್) ಬಳಸಲಾಗುತ್ತಿದೆ. ಇದರಿಂದ ಕಂಪನಿಯ ವ್ಯಾಪಾರ ವಹಿವಾಟು ವೃದ್ಧಿಸಲು ಸುತಾರಾಂ ಸಾಧ್ಯವಿಲ್ಲ. ಮೊದಲ ಹಂತದ ಯೋಜನೆ ಕೈಗೆತ್ತಿಕೊಂಡರೆ ಕಂಪನಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತದೆ. ಹಣಕಾಸು ಬಾಧ್ಯತೆ ಮತ್ತು ಭವಿಷ್ಯದ ವಿಸ್ತರಣಾ ಚಟುವಟಿಕೆಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಅವಿವೇಕದ ನಿರ್ಧಾರ ತೆಗೆದುಕೊಂಡಿದೆ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಲೋಕೋಪಯೋಗಿ ಇಲಾಖೆ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ತನ್ನ ಮನಸ್ಸಿಗೆ ತೋಚಿದಂತೆ ಮಾಡಿಕೊಂಡಿದೆ. ಎಚ್‌ಜಿಎಂಸಿಎಲ್‌ನ ಅಗತ್ಯವನ್ನು ಚರ್ಚಿಸಿಯೇ ಇಲ್ಲ. ಇದಕ್ಕೆ ಪೂರಕ ಯಾವುದೇ ದಾಖಲೆಗಳೂ ನಮಗೆ ಲಭ್ಯವಾಗಿಲ್ಲ. ನಿಮ್ಮ ಬಳಿ ದಾಖಲೆಗಳು ಇದ್ದರೆ ನಮಗೆ ಕೊಡಿ’ ಎಂದು ಮಹಾಲೆಕ್ಕ ಪರಿಶೋಧಕರು ವರದಿಯಲ್ಲಿ ಪ್ರತಿಪಾದಿಸಿದ್ದಾರೆ.
‘ಅಲ್ಲದೇ, ಎಚ್‌ಜಿಎಂಸಿಎಲ್ ಈ ಯೋಜನೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಜತೆಗೆ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ನಿಯಮಗಳು ಮತ್ತು ಷರತ್ತುಗಳು, ವ್ಯಾಜ್ಯ ತೀರ್ಮಾನ ವ್ಯವಸ್ಥೆ, ಪಾವತಿ ವಿಧಾನ ಇತ್ಯಾದಿಗಳ ಕುರಿತೂ ಒಪ್ಪಂದಗಳೂ ಆಗಿಲ್ಲ. ಆದರೂ, 2025 ರ ಫೆಬ್ರುವರಿ 6 ಕ್ಕೆ ₹39.69 ಕೋಟಿ ಮುಂಗಡವನ್ನು ‘ಕುಸುಮ ಮೆಸರ್ಸ್ ಸ್ಟಾರ್ ಇನ್‌ಫ್ರಾಟೆಕ್‘ಗೆ ಪಾವತಿ ಮಾಡಿದೆ. ಅಷ್ಟೇ ಅಲ್ಲ, ಲೋಕೋಪಯೋಗಿ ಇಲಾಖೆ ₹793.94 ಕೋಟಿಗೆ ಕಾರ್ಯಾದೇಶವನ್ನೂ ಬಿಡುಗಡೆ ಮಾಡಿದೆ. ಅಚ್ಚರಿ ಎಂದರೆ ಎಚ್‌ಜಿಎಂಸಿಎಲ್ ಬಳಿ ಕಾರ್ಯಾದೇಶದ ಪತ್ರದ ಪ್ರತಿಯೇ ಇಲ್ಲ’ ಎಂದು ವರದಿ ಹೇಳಿದೆ.
‘ಲೋಕೋಪಯೋಗಿ ಇಲಾಖೆ ತಾನು ಸಿದ್ಧಪಡಿಸಿದ ಸಮಗ್ರ ಯೋಜನಾ ವರದಿಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ಟೌನ್‌ಶಿಪ್ ರಚನಾ ಸುಸ್ಥಿರತೆ ವರದಿಯನ್ನು ಕೇಳಿದೆ. ಇದಕ್ಕಾಗಿ ₹1.40 ಕೋಟಿ ಪಾವತಿಸಿದೆ. ಚಿನ್ನದ ಗಣಿಗಳಲ್ಲಿ ಸ್ಫೋಟ ಕಾರ್ಯವನ್ನು ನಡೆಸುವುದರಿಂದ ಪರಿಣಾಮ ಆಗುವುದೇ, ಅದಕ್ಕಾಗಿ ಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆ ಎಂಬ ವರದಿಯನ್ನು ಕೇಳಿದೆ. ಈ ವಿಚಾರದಲ್ಲೂ ಎಚ್‌ಜಿಎಂಸಿಎಲ್ ಅನ್ನು ಕತ್ತಲಿನಲ್ಲಿ ಇಡಲಾಗಿದೆ’ ಎಂದು ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ.
ಟೌನ್‌ಶಿಪ್ ಯೋಜನೆಯ ಹಿನ್ನೆಲೆ
ಎಚ್‌ಜಿಎಂಸಿಎಲ್ 2023 ರಲ್ಲಿ ₹1000 ಕೋಟಿಯಲ್ಲಿ ಹಟ್ಟಿಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಕರ್ನಾಟಕ ಗೃಹ ಮಂಡಳಿಗೆ (ಕೆಎಚ್‌ಬಿ) ಪ್ರಸ್ತಾವ ಕಳಹಿಸಿತ್ತು. ಮೊದಲ ಹಂತದಲ್ಲಿ ₹380 ಕೋಟಿ ವೆಚ್ಚದಲ್ಲಿ ಕಾರ್ಮಿಕರಿಗೆ 824 ಮನೆಗಳು ರಸ್ತೆ ಪಾರ್ಕಿಂಗ್ ಒಳಚರಂಡಿ ಎಸ್‌ಟಿಪಿ ಸಬ್‌ಸ್ಟೇಷನ್ ಯಜಿ ಕೇಬಲ್ ಮತ್ತಿತರ ನಾಗರಿಕ ಸೌಲಭ್ಯಗಳು 130 ಹಾಸಿಗೆಗಳ ಆಸ್ಪತ್ರೆ ಆಸ್ಪತ್ರೆ ಸಿಬ್ಬಂದಿಗೆ ವಸತಿ ಗೃಹಗಳು ಎರಡು ಮಲ್ಟಿಫ್ಲೆಕ್ಸ್ ಒಳಗೊಂಡ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸುವ ಪ್ರಸ್ತಾಪ ಇತ್ತು. ಕರ್ನಾಟಕ ಗೃಹ ಮಂಡಳಿ 2023 ರ ಮೇ 26 ರಂದು ನಡೆದ 431 ನೇ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿತು. ಎಚ್‌ಜಿಎಂಸಿಎಲ್ ಈ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿಗೆ 2023 ರ ಆಗಸ್ಟ್‌ನಲ್ಲಿ ಪತ್ರ ಬರೆದು ಮಾಹಿತಿ ತಿಳಿಸಿತು. ಆ ಪ್ರಸ್ತಾವನೆಗೆ ₹25 ಕೋಟಿಯಲ್ಲಿ ಕೀಡಾ ಸಂಕೀರ್ಣ ನಿರ್ಮಾಣ ಯೋಜನೆಯನ್ನೂ ಸೇರಿಸಿ ಅಂದಾಜು ವೆಚ್ಚವನ್ನು ₹405 ಕೋಟಿಗೆ ಪರಿಷ್ಕರಿಸಲಾಯಿತು. ಬಳಿಕ ಸಂಪುಟ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಯಿತು. ಏತನ್ಮಧ್ಯೆ ಗಣಿ ಮತ್ತು ಭೂವಿಜ್ಞಾನ ಸಚಿವರು ಈ ಟೌನ್ ಶಿಪ್ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಕಾರ್ಯಗತಗೊಳಿಸಿ ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ₹998.50 ಕೋಟಿಗೆ ಸಮಗ್ರ ಯೋಜನಾ ವರದಿ ಸಲ್ಲಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯ ಪಿಆರ್‌ಎಎಂಸಿ ಅಡಿಯಲ್ಲಿ ಕಾರ್ಯಗತಗೊಳಿಸಬೇಕು ಎಂಬ ಷರತ್ತಿನ ಅಡಿ ಅನುಮೋದನೆ ನೀಡಿತು. ಟೌನ್‌ಶಿಪ್‌ಗೆ ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ.
ಎಚ್‌ಜಿಎಂಸಿಎಲ್‌ಗೆ ಪ್ರಶ್ನೆಗಳು
* ಕೆಎಚ್‌ಬಿ ₹1000 ಕೋಟಿಗೆ 2624 ಮನೆಗಳ ಟೌನ್‌ಶಿಪ್ ನಿರ್ಮಿಸಿಕೊಡುವುದಾಗಿ ಹೇಳಿತ್ತು. ಆದರೆ ಲೋಕೋಪಯೋಗಿ ಇಲಾಖೆಗೆ ₹998.50 ಕೋಟಿಯಲ್ಲಿ 912 ಮನೆಗಳ ಟೌನ್‌ಶಿಪ್‌ಗೆ ಒಪ್ಪಿಗೆ ನೀಡಿದ್ದೇಕೆ? ಲೋಕೋಪಯೋಗಿ ಇಲಾಖೆ ಕುಸುಮ ಮೆಸರ್ಸ್ ಸ್ಟಾರ್ ಇನ್‌ಫ್ರಾಟೆಕ್‌ಗೆ (ಸ್ಟಾರ್ ಬಿಲ್ಡರ್) ಗುತ್ತಿಗೆ ನೀಡಿದ್ದೇಕೆ? *ವೆಚ್ಚವನ್ನು ಏಕಾಏಕಿ ಏರಿಸಿದರ ಕಾರಣಗಳೇನು? * 2624 ಮನೆಗಳ ಬದಲಿಗೆ 912 ಮನೆಗಳನ್ನು ಕಟ್ಟಿಕೊಟ್ಟರೆ ಉಳಿದ 1712 ಕಾರ್ಮಿಕರಿಗೆ ಯಾವಾಗ ಮನೆ ಕಟ್ಟಿಕೊಡುತ್ತೀರಿ? ಇವರಿಗೆ ಮನೆ ಸಿಗದೇ ಹೋದರೆ ಕಾರ್ಮಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆಯಲ್ಲವೇ? * ಲೋಕೋಪಯೋಗಿ ಇಲಾಖೆ ಟೌನ್‌ಶಿಪ್ ನಿರ್ಮಾಣದಲ್ಲಿ ಪರಿಣತಿ ಹೊಂದಿಲ್ಲ. ಗಣಿ ಸಚಿವರ ನಿರ್ದೇಶನ ಇಲ್ಲದೇ ಇದ್ದರೆ ಎಚ್‌ಜಿಎಂಸಿಎಲ್ ಲೋಕೋಪಯೋಗಿ ಇಲಾಖೆಯನ್ನು ಆಯ್ಕೆ ಮಾಡುತ್ತಿರಲಿಲ್ಲ. * ನಾಲ್ಕು ಗಣಿಗಳಿಗೆ 1987 ರಿಂದ ಬಾಡಿಗೆ ಪಾವತಿ ಮಾಡಲಾಗುತ್ತಿದೆ. ಆದರೆ ಅಲ್ಲಿ ಈವರೆಗೂ ಗಣಿಗಾರಿಕೆ ಆರಂಭಿಸಿಲ್ಲ. ಗಣಿ ಚಟುವಟಿಕೆ ವಿಸ್ತರಣೆ ಮಾಡುವುದರ ಬದಲು ಟೌನ್‌ಶಿಪ್ ಮೇಲೆ ಹೂಡಿಕೆ ಮಾಡುವ ಅಗತ್ಯವೇನಿದೆ? *ಅಗತ್ಯ ಮೂಲ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳದೇ ಉತ್ಪಾದಕತೆ ಹೆಚ್ಚಿಸುವತ್ತ ಗಮನ ಹರಿಸದೇ ₹998.50 ಕೋಟಿಯ ಟೌನ್‌ಶಿಪ್ ಯೋಜನೆಯ ಅಗತ್ಯ ಏನಿದೆ ಎಂಬುದಕ್ಕೆ ಸ್ಪಷ್ಟನೆಯ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.