ADVERTISEMENT

ಆಜಾನ್‌ ಬಗ್ಗೆ ಹೇಳಿದ್ದು ಧರ್ಮ ನಿಂದನೆ ಅಲ್ಲ: ಕೆ.ಎಸ್‌ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:40 IST
Last Updated 14 ಮಾರ್ಚ್ 2023, 4:40 IST
   

ಮಂಗಳೂರು: ‘ಮೈಕ್‌ ಹಾಕಿಕೊಂಡು ಕೂಗಿದರೆ ಮಾತ್ರ ಅಲ್ಲಾನಿಗೆ ಕೇಳಿಸುತ್ತದೆಯೇ? ಹಾಗಾದರೆ ಅಲ್ಲಾನಿಗೆ ಕಿವುಡ ಅಂತ ಹೇಳಬೇಕಾಗುತ್ತದೆ’ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ, ‘ಆಜಾನ್‌ ನಿಷೇಧ ಕುರಿತು ಮಾತನಾಡುವಾಗ ಹೀಗೆ ಕೇಳಿದ್ದು ಹೌದು. ಇದು ಧಾರ್ಮಿಕ ನಿಂದನೆ ಅಲ್ಲ’ ಎಂದು ಪ್ರತಿಪಾದಿಸಿದರು.

‘ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಆಜಾನ್‌ನಿಂದ ಸಮಸ್ಯೆ ಆಗುತ್ತದೆ ಎಂಬ ಭಾವನೆ ಜನರಲ್ಲಿದೆ. ಕಾವೂರಿನಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅದನ್ನು ವ್ಯಕ್ತಪಡಿಸಿದ್ದೇನಷ್ಟೇ. ಮುಸ್ಲಿಂ ನಾಯಕರು ಈ ಬಗ್ಗೆ ಚಿಂತನೆ ಮಾಡಬೇಕು’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಖಂಡ ಭಜನೆ ವರ್ಷಪೂರ್ತಿ ನಡೆಯುವುದಿಲ್ಲ. ಕೆಲವೆಡೆ ಮಾತ್ರ ದಿನದ 24 ಗಂಟೆ ನಡೆಯುತ್ತದೆ. ಇದನ್ನು ಜನ ಸಹಿಸಿಕೊಳ್ಳಬೇಕು’ ಎಂದರು.

ADVERTISEMENT

ಡಿಕೆಶಿ ಪ್ರೇರಣೆ: ‘ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಸಿಕ್ಕಾಗ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಾರ್ವ ಜನಿಕವಾಗಿ ವಿಜಯೋತ್ಸವ ಮೆರವಣಿಗೆ ನಡೆಸಿರುವುದಕ್ಕೆ ಪ್ರೇರಣೆ ನೀಡಿದ್ದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌. ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದ ಡಿಕೆಶಿ ಅವರನ್ನು ಅವರ ಪಕ್ಷದ ಬೆಂಬಲಿಗರು ವಿಮಾನನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆ ತಂದಿದ್ದರು. ಮಾಡಾಳ್‌ ವಿರೂಪಾಕ್ಷಪ್ಪ ಈ ರೀತಿ ಮಾಡಿದ್ದು ತಪ್ಪು. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ಸ್ಪಷವಾಗಿ ಇದನ್ನು ಟೀಕೆ ಮಾಡಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ ಮೆರವಣಿಗೆ ಮಾಡಿದ್ದಾಗ ಕಾಂಗ್ರೆಸ್‌ ನಾಯಕರು ಒಬ್ಬರಾದರೂ ಅದನ್ನು ತಪ್ಪು ಅಂತ ಹೇಳಿದ್ದರೇ’ ಎಂದು ಪ್ರಶ್ನಿಸಿದರು.

‌‘75 ವರ್ಷ ದಾಟಿದವರಿಗೆ ಟಿಕೆಟ್‌ ನೀಡಬಾರದು ಎಂದು ಪಕ್ಷದ ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಬಸವರಾಜ ಹೊರಟ್ಟಿ ಅವರಿಗೆ 77 ವರ್ಷ. ಅವರು ಬಿಜೆಪಿ ಸೇರಿ ಸಭಾಪತಿಯೂ ಆಗಿದ್ದಾರೆ. ಪಕ್ಷವು ಚುನಾವಣೆಗೆ ನಿಲ್ಲುವಂತೆ ಸೂಚಿಸಿದರೆ ನಿಲ್ಲುತ್ತೇನೆ. ನನ್ನ ಮಗನಿಗೆ ಅಥವಾ ನನಗೆ ಟಿಕೆಟ್‌ ಕೊಡಬಹುದು. ಒಂದೇ ಮನೆಯಲ್ಲಿ ಇಬ್ಬರಿಗೆ ಟಿಕೆಟ್‌ ನೀಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.