ADVERTISEMENT

ಬಿಜೆಪಿಗೆ ಹೋಗಲ್ಲ: ಶಾಸಕ ಅಶ್ವಿನ್‌ ಕುಮಾರ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 18:09 IST
Last Updated 5 ಫೆಬ್ರುವರಿ 2019, 18:09 IST
ಎಂ.ಅಶ್ವಿನ್‌ ಕುಮಾರ್‌
ಎಂ.ಅಶ್ವಿನ್‌ ಕುಮಾರ್‌   

ಮೈಸೂರು: ‘ಜೆಡಿಎಸ್‌ ಪಕ್ಷದ 37 ಶಾಸಕರು ಸೈನಿಕರಿದ್ದಂತೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ತಿ.ನರಸೀಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ.ಅಶ್ವಿನ್ ಕುಮಾರ್ ಮಂಗಳವಾರ ತಿಳಿಸಿದರು.

ತಿ.ನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಗೆ ಹೋಗಿದ್ದು ನಿಜ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೆ. ಬಿಜೆಪಿಯ ಯಾವೊಬ್ಬ ನಾಯಕರೂ ನನ್ನನ್ನು ಸಂಪರ್ಕ ಮಾಡಿಲ್ಲ. ಆದರೆ, ಕೆಲವರು ನನ್ನ ಹೆಸರನ್ನು ಆಪರೇಷನ್ ಕಮಲದ ಪಟ್ಟಿಗೆ ಸೇರಿಸಿ ವದಂತಿ ಹಬ್ಬಿಸುತ್ತಿದ್ದಾರೆ’ ಎಂದರು.

‘ನಮಗೆಲ್ಲಾ ರಾಜಕೀಯವಾಗಿ ಶಕ್ತಿ ತುಂಬಿರುವುದು ಕುಮಾರಣ್ಣ. ಹೀಗಾಗಿ, ಕಷ್ಟವಿರಲಿ, ಸುಖವಿರಲಿ ಅವರ ಜೊತೆಯೇ ಇರುತ್ತೇವೆ. ಅವರೊಂದಿಗೆ ಹೆಜ್ಜೆ ಇಡುತ್ತೇವೆ’ ಎಂದು ಹೇಳಿದರು.

ADVERTISEMENT

ಸಮಾಧಿ ತೋಡಿಕೊಳ್ಳುತ್ತಿದ್ದಾರೆ: ‘ಬಿಜೆಪಿ ಮುಖಂಡರು ತಮ್ಮ ಸಮಾಧಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ. ಆಪರೇಷನ್‌ ಕಮಲಕ್ಕೆ ಒಳಗಾಗುವುದು ಸಾವಿಗೆ ಸಮಾನ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

‘ಮೈತ್ರಿ ಪಕ್ಷದ ಒಬ್ಬ ಶಾಸಕ ರಾಜೀನಾಮೆ ನೀಡಿದರೂ ಬಿಜೆಪಿಗೆ ದೊಡ್ಡ ಏಟು ಬೀಳಲಿದೆ. ಜನರೇ ದಂಗೆ ಏಳುತ್ತಾರೆ. ಅದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.