ADVERTISEMENT

ನಾನು ಉತ್ತರ ಕರ್ನಾಟಕದ ವಿರೋಧಿ ಅಲ್ಲ: ಸಿ.ಎಂ

ಕಾಯಕ ಯೋಜನೆಗೆ ಚಾಲನೆ; ಬಡವರ ಬಂಧು ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 12:53 IST
Last Updated 20 ಡಿಸೆಂಬರ್ 2018, 12:53 IST
ಬೆಳಗಾವಿಯಲ್ಲಿ ಗುರುವಾರ ಕಾಯಕ ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚೆಕ್ ವಿತರಿಸಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ಗುರುವಾರ ಕಾಯಕ ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚೆಕ್ ವಿತರಿಸಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಉಪಸ್ಥಿತರಿದ್ದರು   

ಬೆಳಗಾವಿ: ‘ಉತ್ತರ ಕರ್ನಾಟಕದ ವಿರೋಧಿ ಎನ್ನುವಂತೆ ನನ್ನನ್ನು ಬಿಂಬಿಸಲಾಗುತ್ತಿದೆ. ನಾನು ಉತ್ತರ ಕರ್ನಾಟಕದ ವಿರೋಧಿ ಅಲ್ಲ. ರಾಜಕೀಯಗೋಸ್ಕರ ನನ್ನ ಮೇಲೆ ಅನುಮಾನ ಸೃಷ್ಟಿಸುವ ಕೆಲಸ ನಡೆದಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ನಗರದಲ್ಲಿ ಸಹಕಾರ ಇಲಾಖೆಯ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ 'ಕಾಯಕ' ಯೋಜನೆ’ ಮತ್ತು 'ಬಡವರ ಬಂಧು' ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ಜಾರಿಗೊಳಿಸಲು ಹೊರಟಿರುವ ರೈತರ ಸಾಲ ಮನ್ನಾ ಯೋಜನೆಯು ಈ ಭಾಗದ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. ₹ 46,000 ಕೋಟಿ ಸಾಲ ಮನ್ನಾ ಯೋಜನೆಯಲ್ಲಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕದ 12 ಜಿಲ್ಲೆಗಳಿಗೆ ₹ 29,190 ಕೋಟಿ ಪ್ರಯೋಜನ ಸಿಗಲಿದೆ. ಮಧ್ಯ ಕರ್ನಾಟಕದ 3 ಜಿಲ್ಲೆಗಳಿಗೆ ₹ 3,981 ಕೋಟಿ ಕರಾವಳಿಯ 3 ಜಿಲ್ಲೆಗಳಿಗೆ ₹ 1,508 ಕೋಟಿ ಹಾಗೂ ದಕ್ಷಿಣ ಕರ್ನಾಟಕದ 12 ಜಿಲ್ಲೆಗಳಿಗೆ ₹ 12,000 ಕೋಟಿ ಲಾಭ ದಕ್ಕಲಿದೆ. ಈ ಅಂಕಿ ಅಂಶಗಳನ್ನು ನೋಡಿದರೆ ನಾನು ಉತ್ತರ ಕರ್ನಾಟಕದ ವಿರೋಧಿ ಅನಿಸುತ್ತದೆಯೇ?’ ಎಂದರು.

ADVERTISEMENT

ಬಡವರು ಮತ್ತು ರೈತರ ನೆರವಿಗೆ ಸರ್ಕಾರ ಸದಾ ಬದ್ಧವಾಗಿದೆ. ರೈತರ ಸಾಲಮನ್ನಾ ಇಡೀ ರಾಷ್ಟ್ರಕ್ಕೆ ಮಾದರಿ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಸೇರಿದಂತೆ ಅನೇಕ ರಾಜ್ಯದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆಯಲು ಮತ್ತು ಅಧ್ಯಯನಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ರೈತರನ್ನು ಸಾಲದಿಂದ ಮುಕ್ತಗೊಳಿಸಲು ವಿಭಿನ್ನ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಕರ್ನಾಟಕವನ್ನು ದೇಶದಲ್ಲಿಯೇ ಮಾದರಿ ರಾಜ್ಯವಾಗಿ ನಿರ್ಮಿಸುವ ಗುರಿ ನಮ್ಮದು’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರ ಇಲಾಖೆಯ ಸಚಿವ ಬಂಡೆಪ್ಪ ಕಾಶೆಂಪೂರ, ಬಡವರಬಂಧು ಹಾಗೂ ಕಾಯಕ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ. ಮೀಟರ್ ಬಡ್ಡಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಬಡವರ ಬಂಧು ಯೋಜನೆ ಜಾರಿಗೊಳಿಸಲಾಗಿದೆ. ಯಾವುದೇ ಬಡ್ಡಿ ಮತ್ತು ಖಾತ್ರಿ ಇಲ್ಲದೇ ಬೀದಿಬದಿ ವ್ಯಾಪಾರಸ್ಥರಿಗೆ ₹ 2,000 ದಿಂದ ₹ 10,000 ವರೆಗೆ ಸಾಲ ನೀಡಲಾಗುತ್ತದೆ. ರಾಜ್ಯದಲ್ಲಿ ಇರುವ 4.5 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ನೆರವಾಗಲಿದೆ ಎಂದರು.

ಕಾಯಕ ಯೋಜನೆಯಡಿ ಸ್ವಸಹಾಯ ಸಂಘಗಳಿಗೆ ₹ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ಹಾಗೂ ₹ 5 ಲಕ್ಷದಿಂದ ₹ 10 ಲಕ್ಷದವರೆಗೆ ಶೇ 4ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಸಚಿವ ಸಾ.ರಾ ಮಹೇಶ್, ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್, ಪಶುಸಂಗೋಪನೆ ಇಲಾಖೆಯ ಸಚಿವರಾದ ವೆಂಕಟರಾವ್ ನಾಡಗೌಡ, ಶಾಸಕ ಬಾಲಕೃಷ್ಣ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಬಾಗಲಕೋಟೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಮಾಜಿ ಸಚಿವ ಅಜಯಕುಮಾರ್ ಸರನಾಯಕ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.