ADVERTISEMENT

ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ್ದೇನೆ: ನಳಿನ್‌ ಕುಮಾರ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 7:12 IST
Last Updated 24 ಜೂನ್ 2023, 7:12 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌   

ಬಳ್ಳಾರಿ: ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅವಧಿ ಮುಕ್ತಾಯವಾಗಿದೆ. ಹೊಸದಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆ ನಡೆಯುತ್ತದೆ. ನೈತಿಕವಾಗಿ ನಾನು ಜವಾಬ್ದಾರಿ ಹೊತ್ತಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರಿಗೆ ಜವಾಬ್ದಾರಿ ಹೊತ್ತು ರಾಜೀನಾಮೆ ಪತ್ರ ನೀಡಿದ್ದೇನೆ. ಮೌಖಿಕವಾಗಿಯೂ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಅಲ್ಲದೇ ಸೋಮಣ್ಣ ಅವರು ರಾಜ್ಯಾಧ್ಯಕ್ಷ ಸ್ಥಾನ ಕೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೋಮಣ್ಣ ಹಿರಿಯ ನಾಯಕರು,ಪಕ್ಷದ ರಾಜ್ಯಾಧ್ಯಕ್ಷ ಕೇಳುವುದು ತಪ್ಪಲ್ಲ ಎಂದು ಹೇಳಿದರು.

ADVERTISEMENT

ಕೇಂದ್ರದಲ್ಲಿ ಕಳೆದ ಒಂಬತ್ತು ವರ್ಷ ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದೇವೆ. ಭಯೋತ್ಪಾದನಾ ಚಟುವಟಿಕೆ ಶೇ 80 ಕಡಿಮೆ ಆಗಿದೆ. ನಕ್ಸಲ್ ಹಾಗೂ ಆತಂಕವಾದ ನಿರ್ಮೂಲನೆಯಾಗಿದೆ ಎಂದರು.

ಇನ್ನು ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ನಿರಂತರವಾಗಿ 5 ಕೆಜಿ ಅಕ್ಕಿ ಕೊಡುತ್ತದೆ. ದೇಶದ ಎಲ್ಲಾ ರಾಜ್ಯಗಳಿಗೆ ಅಕ್ಕಿ ಕೊಡುತ್ತದೆ. ಬರ ಮತ್ತು ನೆರೆ ಬಂದಾಗ ವಿತರಿಸಲು ಕೇಂದ್ರ ಅಕ್ಕಿ ಸಂಗ್ರಹ ಮಾಡುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಕಾಂಗ್ರೆಸ್ ನ ಗ್ಯಾರಂಟಿಗಳಿಂದ ಸರ್ಕಾರ ಬಂದಿದೆ ಎಂದರು.

ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳ ಒಪ್ಪಂದದ ಹೇಳಿಕೆ ನೀಡಿದವರನ್ನ ಕರೆದು ಅಭಿಪ್ರಾಯ ಕೇಳಿದ್ದೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿಯಿಂದ ಲಿಂಗಾಯತರ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಲಿಂಗಾಯತರು ಹಾಗೂ ಯಡಿಯೂರಪ್ಪನವರನ್ನು ಕಡೆಗಣನೆ ಮಾಡಿಲ್ಲ. ಕರ್ನಾಟಕದಲ್ಲಿ ಲಿಂಗಾಯತರನ್ನುಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಬಿಎಸ್‌ವೈ, ಬಸವರಾಜ ಬೊಮ್ಮಾಯಿ ಅವರನ್ನ ಬಿಜೆಪಿ ಸಿಎಂ ಮಾಡಿದೆ. ಲಿಂಗಾಯತರು ಮತ್ತೆ ಸಿಎಂ ಆಗಬೇಕಾದ್ರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.