ADVERTISEMENT

ನಾನು ಏಕಾಂಗಿ ಅಲ್ಲ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 5:20 IST
Last Updated 29 ಮಾರ್ಚ್ 2019, 5:20 IST
   

ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಇದ್ದಂತೆಯೇ ಎರಡೂ ಪಕ್ಷದ‌ ಮುಖಂಡರು ನನ್ನೊಂದಿಗೇ ಇದ್ದಾರೆ. ನಾನು ಈಗ ಏಕಾಂಗಿ ಆಗಿಲ್ಲ ಎಂದು ಲೋಕಸಭೆ ಚುನಾವಣೆಯ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ‌ ಪ್ರತಿಪಾದಿಸಿದರು.

ಮೈತ್ರಿ ಸರ್ಕಾರದ ಎಲ್ಲ‌ ಸಚಿವರು, ಶಾಸಕರು ನನ್ನೊಂದಿಗೆ ಇದ್ದಾರೆ. ನಾಗೇಂದ್ರ ‌ಅವರೊಂದಿಗೂ ಮಾತನಾಡಿರುವೆ. ಅವರು ಪಕ್ಷಕ್ಕೆ‌ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನಗರದ ಗುಗ್ಗರಹಟ್ಟಿಯಲ್ಲಿ ತಮ್ಮ ಎರಡನೇ ಬಾಡಿಗೆ ಮನೆಯ ಪ್ರವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ADVERTISEMENT

ಶಾಸಕರಾದ ಆನಂದ್‌ಸಿಂಗ್ ಮತ್ತು‌ ಗಣೇಶ‌ ನಡುವೆ ಸಾಮರಸ್ಯ ಮೂಡಿಸುವ‌ ಪ್ರಯತ್ನ ನಡೆದಿದೆ. ಅದು ಯಶಸ್ವಿಯಾಗುತ್ತದೆ ಎಂದರು.

ಶಾಸಕರಿಬ್ಬರ ಭಿನ್ನಾಭಿಪ್ರಾಯವು ಮತದಾರರ ಮೇಲೆ ಯಾವ ಪರಿಣಾಮ ವನ್ನು ಬೀರುವುದಿಲ್ಲ ಎಂದರು.

ಮೂರು ಮನೆ: ಬಳ್ಳಾರಿ ಕ್ಷೇತ್ರದಲ್ಲಿ ಈಗ ಮೂರು ಮನೆ ಮಾಡಿರುವೆ.‌ ಹೊಸಪೇಟೆಯಲ್ಲಿ ಒಂದು, ನಗರದಲ್ಲಿ‌ ಎರಡು ಮನೆಗಳಿವೆ. ಸಂವಿಧಾನದ ಅರಿವಿಲ್ಲದವರು ಮಾತ್ರ ಹೊರಗಿನವರು- ಒಳಗಿನವರು ಎಂಬ ಭೇದವನ್ನು ಮುಂದೊಡ್ಡಿದ್ದರು ಎಂದು ಸ್ಮರಿಸಿದರು.

ಆದಾಯ ತೆರಿಗೆ ಇಲಾಖೆಯು ಏಕಪಕ್ಷೀಯವಾಗಿ ಮೈತ್ರಿ ಸರ್ಕಾರದ ಮುಖಂಡರ ಮೇಲೆ ದಾಳಿ ಕಾರ್ಯಾಚರಣೆ ನಡೆಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವೇಂದ್ರಪ್ಪ ಅವರ ಬಳಿ ಹೆಚ್ಚಿನ ಹಣವಿರುವುದರಿಂದ ಅವರಿಗೆ ಬಿಜೆಪಿ ‌ಟಿಕೆಟ್ ನೀಡಿದೆ ಎಂದು ಕ್ಷೇತ್ರದಲ್ಲಿ ಮತದಾರರು ಹೇಳುತ್ತಿದ್ದಾರೆ. ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಇಂಥ ಮಾತುಗಳು ಕೇಳಿ ಬರುತ್ತಿವೆ ಎಂದರು.

ನನಗೆ‌ ವಿಳಾಸ ಕೊಟ್ಟಂಥ ಮತದಾರರಿಗೆ ಕೃತಜ್ಞ. ಇದುವರೆಗೆ ಜಿಲ್ಲಾ ಖನಿಜ‌ನಿಧಿ ಅಡಿ ಸಂಸದರಿಗೆ ಮಂಜೂರಾಗಿರುವ ₹25 ಕೋಟಿಯಲ್ಲಿ ₹3 ಕೋಟಿಯನ್ನು ವಿಮ್ಸ್‌ ಅಭಿವೃದ್ಧಿಗೆ, ₹3ಕೋಟಿಯನ್ನು ಕನ್ನಡ ವಿಶ್ವವಿದ್ಯಾಲಯ ಮತ್ತು ಹಂಪಿ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದರು.

ನಾಮಪತ್ರ: ಏಪ್ರಿಲ್ 2ರಂದು ದುರ್ಗಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹಾಜರಿರಲಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಅಕ್ಟೋಬರ್‌ 12ರಂದು ನಾಮಪತ್ರ ಸಲ್ಲಿಸಿದ ‌ದಿನವೂ ಮಂಗಳವಾರ, ಫಲಿತಾಂಶ ಪ್ರಕಟವಾದ‌ ದಿನವಾದ ನ.6 ಕೂಡ ಮಂಗಳವಾರ. ಈ ಬಾರಿ ಲೋಕಸಭೆ ಚುನಾವಣೆಯ ನಾಮ ಪತ್ರ ಸಲ್ಲಿಸುವ‌ ದಿನವೂ ಮಂಗಳವಾರವೇ ಆಗಿರುವುದು ಕಾಕತಾಳೀಯವಷ್ಟೆ ಎಂದರು.

ಬಿಜೆಪಿಯ ಮುಖಂಡರ ಅಕ್ರಮ ಗಣಿಗಾರಿಕೆ ವಿರುದ್ಧ ಮತ್ತು ಪಕ್ಷದ ಜನವಿರೋಧಿ ನೀತಿಯನ್ನು ವಿರೋಧಿಸಿ ಕಾನೂನು ಹೋರಾಟ ನಡೆಸುತ್ತಿರುವ ಟಪಾಲ್ ಗಣೇಶ್ ಉಗ್ರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹ್ಮದ್ ರಫೀಕ್, ಯುವ‌ ಕಾಂಗ್ರೆಸ್ ಮುಖಂಡ ಹನುಮ ಕಿಶೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.