ADVERTISEMENT

ಸಿಬಿಐ ಬಲೆಗೆ ಐ.ಟಿ ಅಧಿಕಾರಿಗಳು

ಬಿಲ್ಡರ್‌ ಕಂಪೆನಿಯಿಂದ ₹ 7.5 ಲಕ್ಷ ಸ್ವೀಕರಿಸುತ್ತಿದ್ದಾಗ ಬಂಧನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:32 IST
Last Updated 3 ಏಪ್ರಿಲ್ 2019, 20:32 IST
   

ಬೆಂಗಳೂರು:‍‍ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಂದ ಲಂಚ ಪಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಬ್ಬರನ್ನು ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಚ್‌.ಆರ್‌. ನಾಗೇಶ್‌ ಅವರು ‘ವಿಂಡ್ಸರ್‌ ಎಡಿಫೈಸ್‌’ ಎಂಬ ಕಂಪನಿಯ ಶ್ರೀನಿವಾಸ್‌ ಅವರಿಂದ ₹ 15 ಲಕ್ಷ ಲಂಚ ಪಡೆಯುವಾಗ ಸಿಬಿಐ ಪೊಲೀಸರು ಬಂಧಿಸಿದರು. ಈ ಪ್ರಕರಣದಲ್ಲಿ ಮತ್ತೊಬ್ಬ ಐಟಿಒ ನರೇಂದ್ರ ಸಿಂಗ್‌ ಅವರನ್ನು ಬಂಧಿಸಲಾಗಿದೆ.

ನಾಗೇಶ್‌ ಮತ್ತು ಅವರ ತಂಡ ವಿಂಡ್ಸರ್‌ ಎಡಿಫೈಸ್‌ ಕಂಪನಿಯ ಆದಾಯ ಕುರಿತು ಮಾರ್ಚ್‌ 6ರಂದು ಸಮೀಕ್ಷೆ ನಡೆಸಿತ್ತು. ತನಿಖೆ ಸಮಯದಲ್ಲಿ ಸರ್ವೋತ್ತಮ ರಾಜು ಅವರಿಗೆ ಶ್ರೀನಿವಾಸ್‌ ಅವರು ನೀಡಿದ್ದ ₹ 25 ಲಕ್ಷ ಮತ್ತು ₹ 15 ಲಕ್ಷದ ಎರಡು ರಶೀದಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ADVERTISEMENT

ಶ್ರೀನಿವಾಸ್‌ ಅವರಿಗೆ 11ರಂದು ವಿಚಾರಣೆಗೆ ಹಾಜರಾಗುವಂತೆ ನಾಗೇಶ್‌ ನೋಟಿಸ್‌ ನೀಡಿದ್ದರು. ಆಮೇಲೆ ಮೇಲಿಂದ ಮೇಲೆ ಅವರನ್ನು ಬಿಎಂಟಿಸಿ ಕಟ್ಟಡದಲ್ಲಿರುವ ಐ.ಟಿ ಕಚೇರಿಗೆ ಕರೆಸಲಾಗಿತ್ತು. ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಕಮಿಷನರ್‌ ಬಳಿಯೂ ಕರೆದುಕೊಂಡು ಹೋಗಲಾಗಿತ್ತು.

ಮಾರ್ಚ್‌ 19ರಂದು ನಾಗೇಶ್‌ ತಮ್ಮನ್ನು ನರೇಂದ್ರ ಸಿಂಗ್‌ ಅವರ ಬಳಿಗೆ ಕಳುಹಿಸಿದರು. ನರೇಂದ್ರ ಸಿಂಗ್‌ ಆ ಸಮಯದಲ್ಲಿ ₹ 20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟರು. ತೀವ್ರ ಒತ್ತಾಯದ ಬಳಿಕ ₹ 15ಲಕ್ಷಕ್ಕೆ ಒಪ್ಪಿಕೊಂಡರು. 23ರಂದು ಶ್ರೀನಿವಾಸ್‌ ಮತ್ತೆ ನಾಗೇಶ್‌ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ₹ 5 ಲಕ್ಷಕ್ಕೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದರು. ಕೊನೆಗೆ ₹ 7.5 ಲಕ್ಷಕ್ಕೆ ಒಪ್ಪಲಾಯಿತು.

ಅದರಂತೆ ನಾಗೇಶ್‌, ಶ್ರೀನಿವಾಸ್‌ ಅವರಿಂದ ಕೆಫೆ ಕಾಫಿ ಡೇಯಲ್ಲಿ ಲಂಚದ ಹಣ ಸ್ವೀಕರಿಸುವಾಗ ಸಿಬಿಐ ಅಧಿಕಾರಿಗಳು ಬಂಧಿಸಿದರು. ಆನಂತರ ನರೇಂದ್ರ ಸಿಂಗ್‌ ಅವರನ್ನು ಬಂಧಿಸಲಾಯಿತು. ಈ ಇಬ್ಬರು ಅಧಿಕಾರಿಗಳನ್ನು ಗುರುವಾರ ಅಮಾನತು ಮಾಡುವ ಸಾಧ್ಯತೆ ಇದೆ. ಕರ್ನಾಟಕ ಹಾಗೂ ಗೋವಾ ವೃತ್ತದ ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಲಂಚ ಸ್ವೀಕರಿಸಿದ ಮೊದಲ ಪ್ರಕರಣ ಇದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.