ADVERTISEMENT

ಐಟಿ ದಾಳಿ: ಚುನಾವಣೆ ಖರ್ಚಿಗೆ ಗುತ್ತಿಗೆದಾರರಿಂದ ಹಣ ವಸೂಲು ಮಾಡುತ್ತಿದ್ದ ಎಫ್‌ಡಿಎ

ಬೆಂಗಳೂರಿನ ಹೋಟೆಲ್‌ ಮೇಲೆ ಐಟಿ ದಾಳಿ:

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:47 IST
Last Updated 15 ಮಾರ್ಚ್ 2019, 19:47 IST
   

ಬೆಂಗಳೂರು: ಗಾಂಧಿನಗರದಲ್ಲಿರುವ ರಾಜಮಹಲ್‌ ಹೋಟೆಲ್‌ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ದಾಳಿ ನಡೆಸಿ ₹ 1.5 ಕೋಟಿಗೂ ಅಧಿಕ ಹಣ ಮತ್ತು ದಾಖಲೆ ವಶಪಡಿಸಿಕೊಂಡಿದ್ದಾರೆ.

ಈ ಹಣ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕ ನಾರಾಯಣ
ಗೌಡ ಬಿ. ಪಾಟೀಲ ಅವರಿಗೆ ಸೇರಿದ್ದು ಎಂದು ಉನ್ನತ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಖರ್ಚಿಗಾಗಿ ರಾಜಕೀಯ ಮುಖಂಡರಿಗೆ ಸಂದಾಯ ಮಾಡಲು ಆರ್‌ಡಿಪಿಆರ್‌ ಇಲಾಖೆ ಗುತ್ತಿಗೆದಾರರಿಂದ ಕಮಿಷನ್‌ ವಸೂಲು ಮಾಡಿ ಹೋಟೆಲ್‌ನಲ್ಲಿ ಇಡಲಾಗಿತ್ತು. ₹ 100, 200, 500 ಮತ್ತು 2000 ಮುಖಬೆಲೆಯ ನೋಟಿನ ಕಂತೆಗಳು ಇದರಲ್ಲಿ ಸೇರಿವೆ. ಕಮಿಷನ್‌ ಸಂದಾಯ ಮಾಡಿರುವ ಗುತ್ತಿಗೆದಾರರ ಹೆಸರಿರುವ ಬಿಡಿ ಹಾಳೆಗಳೂ ಅಧಿಕಾರಿಗಳಿಗೆ ಸಿಕ್ಕಿವೆ.

ADVERTISEMENT

ಹಾವೇರಿಯಲ್ಲಿ ಕೆಲಸ ಮಾಡುತ್ತಿರುವ ನಾರಾಯಣಗೌಡ ಒಂದು ವಾರದಿಂದ ಹೋಟೆಲ್‌ನಲ್ಲಿ ಎರಡು ಕೋಣೆಗಳನ್ನು (ರೂಂ ನಂಬರ್‌ 103, 105) ಬಾಡಿಗೆಗೆ ಪಡೆದು ಟ್ಯಾಕ್ಸಿ ಚಾಲಕನ ಜೊತೆ ತಂಗಿದ್ದರು. ಗುತ್ತಿಗೆ ಮೌಲ್ಯದ ಶೇ 5ರಷ್ಟು ಕಮಿಷನ್‌ ವಸೂಲು ಮಾಡುತ್ತಿದ್ದರು.ಮೂಲತಃ ಲೆಕ್ಕಪತ್ರ ಇಲಾಖೆಗೆ ಸೇರಿರುವ ಇವರು ನಿಯೋಜನೆ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬಂದಿದ್ದರು.

ಐ.ಟಿ ಅಧಿಕಾರಿಗಳು ಗುರುವಾರ ಸಂಜೆ ಹೋಟೆಲ್‌ ಮೇಲೆ ದಾಳಿ ಮಾಡಿದಾಗ ಚಾಲಕ ಮಾತ್ರ ಇದ್ದರು. ವಿಚಾರಣೆಗೆ ಒಳಪಡಿಸಿದಾಗ, ಹೋಟೆಲ್‌ನಲ್ಲಿ ಇಟ್ಟಿದ್ದ ಹಣದಲ್ಲಿ ಸ್ವಲ್ಪ ಭಾಗ ಪಾಟೀಲರು ವಸೂಲು ಮಾಡಿದ್ದರು. ಇನ್ನೂ ಸ್ವಲ್ಪ ಭಾಗವನ್ನು ತಾವು ವಸೂಲು ಮಾಡಿರುವುದಾಗಿ ಹೇಳಿದ್ದಾರೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಪಾಟೀಲ ಪರಾರಿಯಾಗಿದ್ದು, ಸದ್ಯದಲ್ಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಶೋಧ ಕಾರ್ಯ ಶುಕ್ರವಾರ ಸಂಜೆವರೆಗೂ ನಡೆಯಿತು.

ತನಿಖೆ ನಡೆಯಲಿ: ಕೃಷ್ಣ ಬೈರೇಗೌಡ
‘ಹೋಟೆಲ್‌ ಮೇಲೆ ಐ.ಟಿ ದಾಳಿ ನಡೆದಿರುವ ಬಗ್ಗೆ ಟಿ.ವಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಧಿಕಾರಿಗಳು ವಶಪಡಿಸಿಕೊಂಡ ಹಣವನ್ನು ಲೋಕಸಭೆ ಚುನಾವಣೆ ಖರ್ಚಿಗೆ ಸಂಗ್ರಹಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆದು ಸತ್ಯ ಹೊರಬರಲಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

‘ಸುದ್ದಿ ತಿಳಿಯುತ್ತಿದ್ದಂತೆ ಇಲಾಖೆ ಕಾರ್ಯದರ್ಶಿಗೂ ಮಾತನಾಡಿದ್ದೇನೆ. ಅವರಿಗೂ ಮಾಹಿತಿ ಇಲ್ಲ. ಐ.ಟಿ ಅಧಿಕಾರಿಗಳು ಟ್ಯಾಕ್ಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈಗ ಇಲಾಖೆ ಸಿಬ್ಬಂದಿ ಹೆಸರು ಹೇಳುತ್ತಿದ್ದಾರೆ. ಸಿಬ್ಬಂದಿ ಯಾರು ಎಂಬುದು ಗೊತ್ತಿಲ್ಲ. ಬರೀ ಕಲ್ಪನೆಗಳ ಆಧಾರದ ಮೇಲೆ ಮಾತನಾಡಲು ಸಾಧ್ಯವಿಲ್ಲ. ವಸ್ತುಸ್ಥಿತಿ ಆಧಾರದ ಮೇಲೆ ತನಿಖೆ ನಡೆದು ಸತ್ಯ ಬಯಲಿಗೆಳೆಯಲಿ’ ಎಂದು ಅವರು ಪ್ರತಿಕ್ರಿಯಿಸಿದರು.

‘ಇಲಾಖೆ ವಿವಿಧ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನದಲ್ಲಿ ಉಳಿದಿರುವ ಹಣವನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡುವುದು ಸಾಮಾನ್ಯ. ಯಾವುದೋ ಸಿಬ್ಬಂದಿ ಅಥವಾ ಅಧಿಕಾರಿ ಗುತ್ತಿಗೆದಾರರಿಂದ ಕಮಿಷನ್‌ ವಸೂಲು ಮಾಡುತ್ತಿದ್ದಾರೆ ಎಂದಾಕ್ಷಣ ಚುನಾವಣೆ ಜೊತೆ ತಳಕು ಹಾಕುವುದು ಸರಿಯಲ್ಲ’ ಎಂದೂ ಸಚಿವರು ಹೇಳಿದರು.

ಪಾಟೀಲ್‌ ಮನೆ ಮೇಲೂ ದಾಳಿ
ಹಾವೇರಿ/ ಧಾರವಾಡ: ಹಾವೇರಿಯಲ್ಲಿರುವ ನಾರಾಯಣಗೌಡ ಪಾಟೀಲ ಅವರ ಮನೆ ಮೇಲೂ ಐ.ಟಿ ದಾಳಿ ನಡೆಯಿತು. ಮೂವರು ಅಧಿಕಾರಿಗಳು ತೆರಳಿ ಶೋಧಿಸಿದರು. ಆ ಸಮಯದಲ್ಲಿ ಅವರ ಪತ್ನಿ ಮಾತ್ರ ಇದ್ದರು.

ಮನೆಯಲ್ಲೂ ಸ್ವಲ್ಪ ಹಣ ಮತ್ತು ಕೆಲವು ಮಹತ್ವದ ದಾಖಲೆ ಸಿಕ್ಕಿದೆ ಎನ್ನಲಾಗಿದೆ. ಸಂಸದ ರಾಜೀವ್‌ ಚಂದ್ರಶೇಖರ್‌ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ₹ 25 ಲಕ್ಷ ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.

ನಾರಾಯಣಗೌಡ ಒಂದು ವಾರದಿಂದ ಕಚೇರಿಗೆ ಗೈರು ಹಾಜರಾಗಿದ್ದಾರೆ.

ಧಾರವಾಡದ ಕುಮಾರೇಶ್ವರ ನಗರದಲ್ಲಿ ಪಾಟೀಲರು ಸ್ವಂತ ಮನೆ ಹೊಂದಿದ್ದಾರೆ. ಆದರೆ, ಈ ಮನೆ ಮೇಲೆ ಐ.ಟಿ ದಾಳಿ ಆಗಿಲ್ಲ. ಬೆಳಿಗ್ಗೆ ಮನೆಗೆ ಬೀಗ ಹಾಕಲಾಗಿತ್ತು. ಸಂಜೆ ವೇಳೆಗೆ ಬೀಗ ತೆಗೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.