ADVERTISEMENT

ಆರೋಗ್ಯಕ್ಕಾಗಿ ಪ್ರತಿನಿತ್ಯ ನಡೆಯುವೆ: ಬೊಮ್ಮಾಯಿ ಪ್ರತಿಜ್ಞೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ * ನಗರದ ವಿವಿಧೆಡೆ ವಿಶ್ವ ಹೃದಯ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 6:33 IST
Last Updated 30 ಸೆಪ್ಟೆಂಬರ್ 2021, 6:33 IST
ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೃದಯದ ಆರೋಗ್ಯದ ಬಗ್ಗೆ ಪ್ರತಿಜ್ಞೆ ಕೈಗೊಳ್ಳಲಾಯಿತು. ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್, ಸಂಸದ ಪಿ.ಸಿ. ಮೋಹನ್, ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಇದ್ದರು.
ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೃದಯದ ಆರೋಗ್ಯದ ಬಗ್ಗೆ ಪ್ರತಿಜ್ಞೆ ಕೈಗೊಳ್ಳಲಾಯಿತು. ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್, ಸಂಸದ ಪಿ.ಸಿ. ಮೋಹನ್, ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಇದ್ದರು.   

ಬೆಂಗಳೂರು: ‘ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ನಿಯಮಿತವಾಗಿ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆಕೈಗೊಂಡರು.

ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡ ವಾಕಥಾನ್‌ ಉದ್ಘಾಟಿಸಿ, ಮಾತನಾಡಿದರು.

‘ಹೃದಯ ನಿರಂತರವಾಗಿ ಮಿಡಿಯುತ್ತಿರುತ್ತದೆ. ಇದರಿಂದಾಗಿ ಅದಕ್ಕೆ ಸಾಕಷ್ಟು ಒತ್ತಡಗಳಿರುತ್ತವೆ. ಈ ಒತ್ತಡ ಹೋಗಲಾಡಿಸಲು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹೀಗಾಗಿ, ಪ್ರತಿಯೊಬ್ಬರೂ ಬೆಳಿಗ್ಗೆ ಕನಿಷ್ಠ ಅರ್ಧ ಗಂಟೆಯಾದರೂ ನಿಯಮಿತವಾಗಿ ನಡೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

ADVERTISEMENT

ಹೃದಯ ಆರೋಗ್ಯ ಜಾಗೃತಿ:‌ನಗರದ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಬುಧವಾರ ಜಾಗೃತಿ ಜಾಥಾ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವೆಬಿನಾರ್‌ಗಳನ್ನು ಆಯೋಜಿಸಿದ್ದವು.

ಹೃದಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ನೆರವು ಕಲ್ಪಿಸಲು ಆಸ್ಟರ್ ಆರ್‌ವಿ ಆಸ್ಪತ್ರೆಯು ಹಮ್ಮಿಕೊಂಡಿದ್ದ ‘ಹೃದಯದಿಂದ ಹೃದಯಕ್ಕೆ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನದ ಭಾಗವಾಗಿ ನಡಿಗೆ ಸ್ಪರ್ಧೆ ಆಯೋಜಿಸಲಾಗಿತ್ತು.

‘ಅ.8ರವರೆಗೆ ಈ ಅಭಿಯಾನ ನಡೆಯಲಿದ್ದು, ಪ್ರತಿ ದಿನ ಒಂದು ಗಂಟೆ ನಡೆಯಲು ಜನರನ್ನು ಪ್ರೋತ್ಸಾಹಿಸುವುದು ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ. ಅಭಿಯಾನದಲ್ಲಿ ಭಾಗವಹಿಸುವವರು ನಡೆಯುವ ಪ್ರತಿ 10 ಸಾವಿರ ಹೆಜ್ಜೆಗಳಿಗೆ ಆಸ್ಟರ್ ಸ್ವಯಂಸೇವಕರು ₹ 100 ಮಗುವಿನ ಹೃದಯ ಶಸಚಿಕಿತ್ಸೆಗೆ ಕೊಡುಗೆ ನೀಡಲಿದ್ದಾರೆ’ ಎಂದು ಆಸ್ಪತ್ರೆ ತಿಳಿಸಿದೆ.

ನಗರದ ಸಕ್ರಾ ವರ್ಲ್ಡ್ ಆಸ್ಪತ್ರೆಯು ‘ನಿಮ್ಮ ಹೃದಯವನ್ನು ಕೇಳಿ, ಹೃದಯವನ್ನು ಆರೋಗ್ಯವಾಗಿರಿಸಿ’ ಕಾರ್ಯಕ್ರಮ ಆಯೋಜಿಸಿತ್ತು. ಇದೇ ವೇಳೆ ಜಪಾನ್ ತಂತ್ರಜ್ಞಾನ ಆಧಾರಿತ ಹೃದಯ ಚಿಕಿತ್ಸಾಲಯಕ್ಕೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಮೊಬೈಲ್ ವಾಹನಕ್ಕೆ ಚಾಲನೆ

ವಿಶ್ವ ಹೃದಯ ದಿನದ ಅಂಗವಾಗಿ ಹೃದಯ ಸಮಸ್ಯೆಗಳ ತಪಾಸಣೆಗೆಫೋರ್ಟಿಸ್ ಆಸ್ಪತ್ರೆಯು ‘ರೂಟ್‌ ನಂ-15’ ಶಿರ್ಷಿಕೆಯಡಿ ಮೊಬೈಲ್‌ ವಾಹನವನ್ನು ಪರಿಚಯಿಸಿದ್ದು, ಇದಕ್ಕೆ ಹೃದ್ರೋಗ ತಜ್ಞಡಾ. ವಿವೇಕ್ ಜವಳಿ ಚಾಲನೆ ನೀಡಿದರು.

‘ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಇದರಲ್ಲಿ ಶೇ 60 ರಷ್ಟು ಮರಣಗಳು ದೇಶದಲ್ಲಿಯೇ ಸಂಭವಿಸುತ್ತಿವೆ. ಬಹುತೇಕರಿಗೆ ಹೃದಯಾಘಾತದ‌ ಬಗ್ಗೆ ಅರಿವಿನ ಕೊರತೆಯಿದೆ. ಇದರಿಂದಾಗಿ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ, ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ’ ಎಂದುಡಾ. ವಿವೇಕ್ ಜವಳಿ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.