ADVERTISEMENT

ಮೂರು ಡಿಸಿಎಂ: ಹೈಕಮಾಂಡ್ ಜತೆ ನಾನೇ ಚರ್ಚಿಸುವೆ ಎಂದ ಜಿ. ‍ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 15:43 IST
Last Updated 19 ಸೆಪ್ಟೆಂಬರ್ 2023, 15:43 IST
ಜಿ.ಪರಮೇಶ್ವರ
ಜಿ.ಪರಮೇಶ್ವರ    

ಬೆಂಗಳೂರು: ‘ಇನ್ನೂ ಮೂವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಆ ಸಮುದಾಯಗಳ ಜನರು ಪಕ್ಷದ ಪರ ನಿಲ್ಲುತ್ತಾರೆ ಎಂಬ ಸಚಿವ ಕೆ.ಎನ್‌. ರಾಜಣ್ಣ ವಾದ ಸರಿ ಇದೆ. ಈ ವಿಚಾರದಲ್ಲಿ ನಾನೇ ಪಕ್ಷದ ಹೈಕಮಾಂಡ್‌ ಭೇಟಿ ಮಾಡಿ ಚರ್ಚಿಸುತ್ತೇನೆ ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಅವಕಾಶ ನೀಡಿದರೆ ಯಾರೂ ಬೇಡ ಎನ್ನುವುದಿಲ್ಲ. ಇದರಲ್ಲಿ ವೈಯಕ್ತಿಕ ಪ್ರಶ್ನೆ ಇಲ್ಲ’ ಎಂದರು.

‘ಹೈಕಮಾಂಡ್‌ ಒಪ್ಪಿದರೆ ಇನ್ನಷ್ಟು ಮಂದಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ಧ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯೂ ಸರಿ ಇದೆ. ನಾವೆಲ್ಲರೂ ಪಕ್ಷದ ಹೈಕಮಾಂಡ್‌ ಅಧೀನದಲ್ಲಿ ಕೆಲಸ ಮಾಡುವವರು. ಹೈಕಮಾಂಡ್‌ ಸೂಚನೆಯಂತೆ ಕೆಲಸ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಮುದಾಯವಾರು ಹೆಚ್ಚು ಪ್ರಾತಿನಿಧ್ಯ ನೀಡಬೇಕು ಎಂದು ರಾಜಣ್ಣ ಒತ್ತಾಯಿಸಿದ್ದಾರೆ. ಇದನ್ನು ಪಕ್ಷದ ಹೈಕಮಾಂಡ್‌ ಅರ್ಥ ಮಾಡಿಕೊಳ್ಳಬೇಕಲ್ಲವೆ? ಪ್ರಾತಿನಿಧ್ಯ ಕೊಟ್ಟಿರುವುದರಿಂದ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಜವಾಬ್ದಾರಿ ವಹಿಸಬಹುದು’ ಎಂದರು.

ಬಹಿರಂಗ ಚರ್ಚೆ ಅಗತ್ಯವಿಲ್ಲ: ಇದೇ ವಿಷಯ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌, ‘ನಮ್ಮ ಜತೆ ನಿಂತಿರುವ ಸಮುದಾಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತು ಬಹಿರಂಗ ಚರ್ಚೆ ಅಗತ್ಯವಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತು ‍ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ. ಪತ್ರ ಬರೆಯುವುದು ರಾಜಣ್ಣ ಅವರ ವೈಯಕ್ತಿಕ ವಿಚಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.