ADVERTISEMENT

‘ಇನ್ನೆಂದೂ ಸಚಿವ ಸ್ಥಾನ‌ಕ್ಕಾಗಿ ಸಿಎಂ ಮನೆ ಬಾಗಿಲಿಗೆ ಹೋಗಲ್ಲ’: ಎಚ್. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 11:35 IST
Last Updated 22 ಡಿಸೆಂಬರ್ 2020, 11:35 IST
   

ಬೆಂಗಳೂರು: 'ನಾನು ಇನ್ನು ಎಂದೂ ಸಚಿವ ಸ್ಥಾನ‌ ಕೇಳಲು ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೋಗುವುದಿಲ್ಲ' ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಶಾಸಕರ ಭವನದಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, 'ಆರ್. ಶಂಕರ್, ಎಂಟಿಬಿ ನಾಗರಾಜ್ ರೀತಿ ಪದೇ ಪದೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವವನು ನಾನಲ್ಲ. ನನಗೆ ಭೇಟಿ ಮಾಡುವ ಅನಿವಾರ್ಯತೆಯೂ ಇಲ್ಲ' ಎಂದರು.

'ಮಂತ್ರಿ ಮಾಡಿ,‌ ಮಂತ್ರಿ ಮಾಡಿ ಎಂದು ಎಷ್ಟು ಬಾರಿ ಕೇಳೋದು ಹೇಳಿ. ಅದು ಅವರ ಜವಾಬ್ದಾರಿ ಅಲ್ಲವೇ. ರಾಜಕಾರಣದಲ್ಲಿ ಕೊಟ್ಟ ಮಾತುಗಳು ಬಹಳ ಮುಖ್ಯ'ಎಂದರು.

ADVERTISEMENT

'ನಾನು ಬಿಜೆಪಿಯಲ್ಲಿ ಯಾರಿಗೆ ಬೇಕೊ ಬೇಡವೊ ಗೊತ್ತಿಲ್ಲ. ಜನರಿಗೆ ಬೇಕಾದವನ್ನಾಗಿದ್ದೇನೆ' ಎಂದೂ ಹೇಳಿದರು.

'ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಸೋಲಿಸಿದರು' ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,'ಹೌದು ಸಿದ್ದರಾಮಯ್ಯ ಅವರನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿದ್ದೆವು. ನಾನು ಆಗ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯ ಅವರನ್ನು ವಿರೋಧ ಮಾಡದೆ ಮುತ್ತು ಕೊಡಲು ಆಗುತ್ತಾ' ಎಂದರು.

'ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ಶಿಷ್ಯರು, ಅವರಿಂದ ಸಹಾಯ ಪಡೆದವರೇ ಒಳ ಒಪ್ಪಂದ ಮಾಡಿಕೊಂಡು ಸೋಲಿಸಿದರು. ಅವರ ದರ್ಪ, ದುರಹಂಕಾರದ ಕಾರಣ ಸೋತಿದ್ದಾರೆ' ಎಂದರು.

'ಜೆಡಿಎಸ್ ಜನರಲ್ಲಿ ಅಭಿವೃದ್ಧಿ ಕನಸುಗಳನ್ನು ಹುಟ್ಟುಹಾಕಿದ್ದ ಪಕ್ಷ. ನಾನೂ ಕೂಡ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷನಾಗಿದ್ದೆ. ಪ್ರಾಂತೀಯ ಪಕ್ಷವನ್ನಾಗಿ ಗಟ್ಟಿ ನೆಲದಲ್ಲಿ ಕಟ್ಟಬೇಕೆಂಬ ಆಸೆ ಇತ್ತು. ಆದರೆ, ಅದಕ್ಕೆ ಬೆಂಬಲ ಸಿಗಲೇ ಇಲ್ಲ. ಅದು ಈಗ ಜಸ್ಟ್ ಅಡ್ಜೆಸ್ಟ್ ಮೆಂಟ್ ಪಾರ್ಟಿಯಾಗಿ ಉಳಿದು ಹೋಗಿದೆ. ಶಕ್ತಿ, ಸತ್ವದ ಮೇಲೆ ಪಕ್ಷವಾಗಿ ಉಳಿಯುವಂತ ಲಕ್ಷಣಗಳು ಕಾಣುತ್ತಿಲ್ಲ. ದೇವೇಗೌಡರು ಇರುವವರೆಗೆ ಮಾತ್ರ ಜೆಡಿಎಸ್ ಉಳಿವು ಎಂಬ ಸಂದೇಶ ಜನರಿಗೆ ರವಾನೆಯಾಗುತ್ತಿದೆ. ರಾಜಕಾರಣದಲ್ಲಿ ನಿರೀಕ್ಷೆಗೂ ಮೀರಿದ ‌ತೀರ್ಮಾನಗಳು ಅಗುತ್ತಿವೆ. ಜೆಡಿಎಸ್ ಪಕ್ಷದ ಕಥೆ ಹ್ಯಾಮ್ಲೆಟ್ ನಾಟಕದಂತಾಗಿದೆ. ಬಿಜೆಪಿಗೆ ಜೆಡಿಎಸ್‌ ಅನಿವಾರ್ಯ ಅಲ್ಲವೇ ಅಲ್ಲ. 2007ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ್ದರು. ಅದು ಹುಡುಗ, ಹುಡುಗಿ ಓಡೋಗಿ ಮದುವೆ ಆಗ್ತಾರಲ್ಲಾ ಹಾಗೆ. ಬಿಜೆಪಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.