ADVERTISEMENT

ಡಿಸಿಎಂ ವಿಚಾರವಾಗಿ ಯಾರಿಗೂ ಮುಜುಗರ ಮಾಡುವುದಿಲ್ಲ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 13:00 IST
Last Updated 2 ಫೆಬ್ರುವರಿ 2020, 13:00 IST
   

ಬೆಳಗಾವಿ: ‘ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಒತ್ತಾಯವಿರುವ ಬಗ್ಗೆ ಹೆಚ್ಚು ಚರ್ಚಿಸುವುದಿಲ್ಲ. ಯಾರಿಗೂ ಮುಜುಗರ ಮಾಡುವುದಕ್ಕೆ ಹೋಗುವುದಿಲ್ಲ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕು’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ಖಾಸಗಿ ಕಾರ್ಯಕ್ರಮಕ್ಕೆಂದು ಭಾನುವಾರ ಇಲ್ಲಿಗೆ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ನಾನು ಮೊದಲಿನಿಂದಲೂ ಆ್ಯಕ್ಟಿವ್ ಆಗೇ ಇದ್ದೇನೆ; ಮುಂದೆಯೂ ಹಾಗೆಯೇ ಇರುತ್ತೇನೆ’ ಎಂದರು.

ADVERTISEMENT

‘ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಫೆ. 6ರಂದು ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಯಾರು ಮಂತ್ರಿಯಾಗಲಿದ್ದಾರೆ ಎನ್ನುವುದನ್ನೂ ಕೆಲವೇ ದಿನಗಳಲ್ಲಿ ತಿಳಿಸುತ್ತಾರೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ’ ಎಂದು ‍ಪ್ರತಿಕ್ರಿಯಿಸಿದರು.

‘ಕೊರೊನಾ ವೈರಸ್‌ ದೇಶದಲ್ಲೂ ಬಹಳಷ್ಟು ಆತಂಕ ಉಂಟು ಮಾಡಿದೆ. ಚೀನಾದಲ್ಲಿ 170 ಮಂದಿ ಬಲಿಯಾಗಿದ್ದಾರೆ. ಕೇರಳದಲ್ಲಿ ವಿದ್ಯಾರ್ಥಿನಿಗೆ ವೈರಸ್ ಶಂಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ನಿಗಾ ವಹಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ವಾರ್ಡ್‌ ಆರಂಭಿಸಲಾಗಿದೆ. ಚೀನಾದಿಂದ ರಾಜ್ಯಕ್ಕೆ ಬಂದವರೆಲ್ಲರ ವೈದ್ಯಕೀಯ ತಪಾಸಣೆಗೆ ಕ್ರಮ ವಹಿಸಲಾಗಿದೆ. ವಿಮಾನನಿಲ್ದಾಣದಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಮಾಸ್ಕ್‌ಗಳ ಕೊರತೆ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.