ADVERTISEMENT

ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಲಾರೆ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 20:10 IST
Last Updated 28 ಜುಲೈ 2021, 20:10 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಹಿಂದಿನ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಹಿರಿಯ ಶಾಸಕ ಜಗದೀಶ ಶೆಟ್ಟರ್‌ ಅವರು ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರದಿರಲು ನಿರ್ಧರಿಸಿದ್ದಾರೆ.

ಶೆಟ್ಟರ್‌ ಅವರು ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ವಿಧಾನಸಭೆಯ ಅಧ್ಯಕ್ಷರಾಗಿದ್ದರು. ಬಿ.ಎಸ್‌. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದ ಗೌಡ ಅವರ ಸಂಪುಟದಲ್ಲೂ ಸಚಿವರಾಗಿದ್ದರು. 2012ರ ಜುಲೈನಿಂದ 2013ರ ಮೇವರೆಗೆ ಮುಖ್ಯಮಂತ್ರಿಯಾಗಿದ್ದರು. 2019ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದರು.

ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಶೆಟ್ಟರ್‌ ಹೆಸರು ಕೂಡ ಚರ್ಚೆಗೆ ಬಂದಿತ್ತು. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ಬಳಿಕ, ಹೊಸ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯದೇ ಇರುವ ತೀರ್ಮಾನವನ್ನು ಶೆಟ್ಟರ್‌ ಕೈಗೊಂಡಿದ್ದಾರೆ.

ADVERTISEMENT

‘ಪ್ರಜಾವಾಣಿ’ ಜತೆ ಮಾತನಾಡಿದ ಜಗದೀಶ ಶೆಟ್ಟರ್‌, ‘ನಾನು ಈ ಹಿಂದೆ ಸಭಾಧ್ಯಕ್ಷನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈಗ ಕಿರಿಯರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡುವ ಆಕಾಂಕ್ಷೆ ನನಗಿಲ್ಲ. ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧನಾಗಿದ್ದೇನೆ’ ಎಂದರು.

‘ಮುಖ್ಯಮಂತ್ರಿ ಆದ ಬಳಿಕವೂ ಯಡಿಯೂರಪ್ಪ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೆ. ಯಡಿಯೂರಪ್ಪ ಹಿರಿಯರು. ನಾನು ಮುಖ್ಯಮಂತ್ರಿಯಾಗುವ ಮೊದಲು ಅವರ ಸಂಪುಟದಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೆ. ಅದೇ ಕಾರಣಕ್ಕಾಗಿ ಆಗ ಸಚಿವ ಸ್ಥಾನ ಒಪ್ಪಿಕೊಂಡಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.