ADVERTISEMENT

ನಾಯಿ ಬೊಗಳಿತೆಂದು ಕಚ್ಚಲಾಗುವುದಿಲ್ಲ: ಲಕ್ಷ್ಮಣ ಸವದಿ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 16:07 IST
Last Updated 7 ಜನವರಿ 2020, 16:07 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ‘ನಾಯಿ ಬೊಗಳಿದರೆ ನಾವು ಅದನ್ನು ಕಚ್ಚಲು ಹೋಗಲಾಗುವುದಿಲ್ಲ. ಯಾರ‍್ಯಾರೋ ಬೊಗಳಿದರೆ ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪ್ರಮುಖರು, ಜವಾಬ್ದಾರಿ ಸ್ಥಾನದಲ್ಲಿರುವವರು ಮಾತನಾಡಿದರೆ ಅದರ ಬಗ್ಗೆ ಚರ್ಚಿಸುತ್ತೇವೆಯೇ ಹೊರತು, ಉಳಿದವರಿಗೆ ಪ್ರತಿಕ್ರಿಯಿಸುವುದಿಲ್ಲ’.

ಪದೇ ಪದೇ ಗಡಿ ವಿವಾದ ಕೆದಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಾಗೂ ಮಹಾರಾಷ್ಟ್ರದ ನಾಯಕರ ಹೇಳಿಕೆಗಳಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಇದು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗಡಿ ವಿವಾದ ಎಂದೋ ಮುಗಿದು ಹೋದ ಅಧ್ಯಾಯ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದು ಈಗಾಗಲೇ ತೀರ್ಮಾನವಾಗಿ ಹೋಗಿದೆ. ಕೆಲವರು ಅನವಶ್ಯವಾಗಿ ಸುಪ್ರೀಂ ಕೋರ್ಟ್‌ಗೆ ವ್ಯಾಜ್ಯ ತೆಗೆದುಕೊಂಡು ಹೋಗಿದ್ದಾರೆ. ಅಲ್ಲೂ ಕರ್ನಾಟಕದ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ’ ಎಂದರು.

ADVERTISEMENT

‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಗಡಿ ವಿಚಾರದ ಬಗ್ಗೆ ಮಾತನಾಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರ ಸಹೋದರ ರಾಜ್ ಠಾಕ್ರೆ 2 ವರ್ಷಗಳ ಹಿಂದೆ ಏನು ಹೇಳಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಲಿ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯಾಗಿ ಅವಿವೇಕದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಶಿವಸೇನೆ ಜೊತೆ ಯಾರೇ ಬಂದರೂ ಬೆಳಗಾವಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಗಡಿ ವಿವಾದ ನೋಡಿಕೊಳ್ಳಲು ಮಹಾರಾಷ್ಟ್ರ ಇಬ್ಬರು ಮಂತ್ರಿಗಳನ್ನು ನೇಮಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆ ನಡೆದಿದೆ. ಮುಖ್ಯಮಂತ್ರಿ ಶೀಘ್ರವೇ ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲೂ ಒಬ್ಬ ಮಂತ್ರಿಗೆ ಗಡಿ ವಿಷಯದ ಉಸ್ತುವಾರಿ ವಹಿಸಲಾಗುವುದು’ ಎಂದು ತಿಳಿಸಿದರು.

‘ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಬೆದರಿಕೆ ಕರೆ ಬಂದಿರುವ ‌ವಿಷಯವನ್ನು ‌ಕೇಂದ್ರ ಗೃಹ ಇಲಾಖೆಗೆ ತಿಳಿಸಲಾಗಿದೆ. ಮೊದಲಿನಿಂದಲೂ ಹಿಂದುತ್ವವಾದವನ್ನು ಪ್ರಬಲವಾಗಿ ಮಂಡಿಸುತ್ತಾ ಬಂದಿರುವ ಈಶ್ವರಪ್ಪ ಇಂತಹ ‌ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಆದರೂ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರಿಗೆ ಭದ್ರತೆ ‌ಒದಗಿಸುವ ಅಗತ್ಯವಿದೆ. ಬೇದರಿಕೆ ಕರೆ ಎಲ್ಲಿಂದ ಬಂದಿದೆ ಎನ್ನುವುದು ತನಿಖೆಯ ಬಳಿಕ ಗೊತ್ತಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.