ಬೆಂಗಳೂರು: ‘ಅನಗತ್ಯ ಆರೋಪ ಮಾಡಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತರುವ ಕೆಲಸ ಶಾಸಕರಿಗೆ ಗೌರವ ತರುವುದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಏನಾದರೂ ಸಮಸ್ಯೆ ಇದ್ದರೆ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯ ಗಮನಕ್ಕೆ ತರಬೇಕು. ಸಾಕ್ಷ್ಯ, ಪುರಾವೆ ಇದ್ದರೆ ಕೊಡಲಿ. ಅದನು ಬಿಟ್ಟು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ’ ಎಂದು ಅವರು ಶಾಸಕ ಬಿ.ಆರ್. ಪಾಟೀಲ ಅವರ ಆರೋಪಕ್ಕೆ ತಿರುಗೇಟು ನೀಡಿದರು.
‘ಶಾಸಕರಾದ ತಮ್ಮ ಗಮನಕ್ಕೆ ತರದೆ ಕ್ಷೇತ್ರಕ್ಕೆ ₹ 17 ಕೋಟಿ ಅನುದಾನ ಬಂದಿದೆ ಎಂಬ ಪಾಟೀಲರ ಹೇಳಿಕೆಯನ್ನು ಒಪ್ಪಲಾಗದು. ಅಧಿಕಾರಿಗಳು ಶಾಸಕರ ಗಮನಕ್ಕೆ ತಂದೇ ಮಾಡಿರುತ್ತಾರೆ. ಮುಖ್ಯಮಂತ್ರಿ ಎಲ್ಲ ಕ್ಷೇತ್ರಗಳಿಗೂ ತಲಾ ₹ 10 ಕೋಟಿಯಿಂದ ₹ 15 ಕೋಟಿವರೆಗೆ ಅನುದಾನ ಕೊಡುತ್ತಲೇ ಇದ್ದಾರೆ’ ಎಂದರು.
‘ಸಚಿವರಿಗೆ ಹತ್ತಾರು ಪತ್ರಗಳು ಬರುತ್ತವೆ. ಶಾಸಕರು ಬರೆದ ಎಲ್ಲ ಪತ್ರಗಳಿಗೂ ಸ್ಪಂದನೆ ಸಿಗಬೇಕು, ಎಲ್ಲ ಬೇಡಿಕೆಗಳೂ ಈಡೇರಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.