ADVERTISEMENT

ಕೋರ್ಟ್‌ ಆದೇಶ ಉಲ್ಲಂಘಿಸಿ ಕೆಎಎಸ್ ಅಧಿಕಾರಿಗಳಿಗೆ ಬಡ್ತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 19:22 IST
Last Updated 21 ಸೆಪ್ಟೆಂಬರ್ 2019, 19:22 IST

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್‌ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಕೋರ್ಟ್‌ ನಿರ್ದೇಶನ ಇದ್ದರೂ, ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕೆಎಎಸ್‌ ಅಧಿಕಾರಿಗಳಿಗೆ ಸರ್ಕಾರ ಬಡ್ತಿ ನೀಡಿ ಆದೇಶ ಹೊರಡಿಸಿದೆ.

ಕೆಎಎಸ್‌ ಕಿರಿಯ ಶ್ರೇಣಿಯ 40 ಅಧಿಕಾರಿಗಳಿಗೆ ಹಿರಿಯ ಶ್ರೇಣಿಗೆ ಬಡ್ತಿ ನೀಡಿ ಇದೇ 20ರಂದು ಆದೇಶ ಹೊರಡಿಸಿರುವುದು ಈಗ ಆಕ್ಷೇಪಕ್ಕೆ ಕಾರಣವಾಗಿದೆ.

‘ಅಧಿಕಾರಿಗಳ ಪೈಕಿ ಕೆಲವರ ಹುದ್ದೆ ಮತ್ತು ಇಲಾಖೆ ಬದಲಾವಣೆಯಾಗುವ ಅಥವಾ ಹುದ್ದೆ ಕಳೆದುಕೊಳ್ಳುವ ಪರಿಣಾಮಗಳ ಕುರಿತ ಪ್ರಸ್ತಾವನೆ ಸರ್ಕಾರದ‍ಪ‍ರಿಶೀಲನೆಯಲ್ಲಿದೆ. ಈ ವಿಷಯದಲ್ಲಿ ತೆಗೆದುಕೊಳ್ಳುವ ಅಂತಿಮ ನಿರ್ಣಯ ಮತ್ತು ನ್ಯಾಯಾಲಯವು ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಪರಿಷ್ಕೃತ ಪಟ್ಟಿಯ ಅನ್ವಯ ಹಿಂಬಡ್ತಿ ಹಾಗೂ ಕೆಲಸದಿಂದ ವಜಾಗೊಳಿಸದೇ ಇರುವ ವಿಷಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹುದ್ದೆ ಬದಲಾವಣೆ ವಿಷಯದಲ್ಲಿ ನಿರ್ಣಯ ಕೈಗೊಳ್ಳದ ಸರ್ಕಾರ, ಬಡ್ತಿ ನೀಡುವ ತರಾತುರಿ ಏನಿತ್ತು ಎಂಬುದು ಬೇರೆ ಇಲಾಖೆಗಳಿಂದ ಕಂದಾಯ ಇಲಾಖೆಗೆ ಬದಲಾವಣೆ ನಿರೀಕ್ಷೆಯಲ್ಲಿರುವ ಗೆಜೆ ಟೆಟ್‌ ಅಧಿಕಾರಿಗಳ ತಕರಾರು. ಹೀಗೆ ಬಡ್ತಿ ನೀಡಲಾಗಿರುವ ಅಧಿಕಾರಿಗಳಿಗೆ ಅವರು ಕೆಲಸ ನಿರ್ವಹಿಸುತ್ತಿರುವ ಹುದ್ದೆ ಯಲ್ಲೇ ಮುಂದುವರಿಸಲಾಗಿದೆ.

ವರ್ಗಾವಣೆ: ಐಎಎಸ್‌ ಹಾಗೂ ಕೆಎಎಸ್‌ ಸೇರಿ ಒಟ್ಟು ಎಂಟು ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಪೂವಿತಾ–ಸಿಇಒ, ಜಿಲ್ಲಾ ಪಂಚಾಯಿತಿ, ಮೈಸೂರು. ಎಚ್‌.ವಿ. ದರ್ಶನ್‌–ಸಿಇಒ, ಜಿಲ್ಲಾ ಪಂಚಾಯಿತಿ, ಕೋಲಾರ. ಪಾಂಡ್ವೆ ರಾಹುಲ್ ತುಕಾರಾಂ– ಆಯುಕ್ತ, ಕಲಬುರ್ಗಿ ನಗರ ಪಾಲಿಕೆ. ಗಂಗೂಬಾಯಿ ರಮೇಶ ಮಾನಕರ–ಸಿಇಒ, ಜಿಲ್ಲಾ ಪಂಚಾಯಿತಿ, ಹಾವೇರಿ.(ಎಲ್ಲರೂ ಐಎಎಸ್‌) ಅನಿತಾ ಲಕ್ಷ್ಮಿ– ವ್ಯವಸ್ಥಾಪಕ ನಿರ್ದೇಶಕಿ, ಕಿಯೋನಿಕ್ಸ್‌, ಬೆಂಗಳೂರು. ದಾಕ್ಷಾಯಿಣಿ–ಉಪವಿಭಾಗಾಧಿಕಾರಿ, ರಾಮನಗರ. ಬಲರಾಮ ಲಮಾಣಿ–ಉಪ ವಿಭಾಗಾಧಿಕಾರಿ, ಜಮಖಂಡಿ. ಎಚ್.ಜಯ– ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.