ADVERTISEMENT

ಚಿತ್ರರಂಗದಲ್ಲಿ ಆಂತರಿಕ ದೂರು ಸಮಿತಿ ಇದೆ: ಮಹಿಳಾ ಆಯೋಗ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 12:16 IST
Last Updated 22 ಅಕ್ಟೋಬರ್ 2018, 12:16 IST
ನಾಗಲಕ್ಷ್ಮಿಬಾಯಿ
ನಾಗಲಕ್ಷ್ಮಿಬಾಯಿ   

ಬೆಂಗಳೂರು: ಕನ್ನಡ ಚಲನಚಿತ್ರ ರಂಗದಲ್ಲಿ ಲೈಂಗಿಕ ದೌರ್ಜನ್ಯಗಳ ವಿಚಾರಣೆಗೆ ಆಂತರಿಕ ದೂರು ಸಮಿತಿ ಇದ್ದು, ಚಲನಚಿತ್ರ ರಂಗದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ದೂರು ಬಂದಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ತಿಳಿಸಿದ್ದಾರೆ.

‘ಮೀ ಟೂ’ ವಿವಾದ ಭುಗಿಲೇಳುವುದಕ್ಕೂ ಮೊದಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದೆ. ಆಗ ಚಿತ್ರರಂಗದ ಪ್ರಮುಖರಾದ ಸಾ.ರಾ.ಗೋವಿಂದು ಮತ್ತು ಚಿನ್ನೇಗೌಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ ಎಂದರು.

ನಾನು ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿರೆ ತೆರೆಯ ಇಬ್ಬರು ನಟಿಯರಿಂದ ದೂರು ದಾಖಲಾಗಿದ್ದು ಗಮನಕ್ಕೆ ಬಂದಿತ್ತು. ಆದರೆ, ಚಲನಚಿತ್ರ ರಂಗದ ಮಹಿಳೆಯರಿಂದ ಯಾವುದೇ ದೂರು ದಾಖಲಾಗಿರಲಿಲ್ಲ ಎಂದು ಅವರು ತಿಳಿಸಿದರು.

ADVERTISEMENT

ಶಾಲೆ, ಕಾಲೇಜು, ಆಸ್ಪತ್ರೆ ಹೀಗೆ 10 ಜನ ಮಹಿಳೆಯರು ಒಟ್ಟಿಗೆ ಸೇರಿ ಕೆಲಸ ಮಾಡುವ ಸ್ಥಳದಲ್ಲಿ ಆಂತರಿಕ ವಿಚಾರಣಾ ಸಮಿತಿಯನ್ನು ರಚಿಸಬೇಕು ಎಂಬ ನಿಯಮವಿದೆ. ಚಲನಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ ಎಂದರು.

ಮಹಿಳಾ ಆಯೋಗಕ್ಕೆ ಉಸ್ತುವಾರಿ:

ರಾಜ್ಯ ಸರ್ಕಾರ ಪ್ರಮುಖ ಇಲಾಖೆಗಳಾದ ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಎಲ್ಲಾ ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆಯೆ ಇಲ್ಲವೇ ಎಂಬುದರ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಯಾರಿಲ್ಲ. ಆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ವಹಿಸಲಾಗಿದೆ. ಆಯೋಗಕ್ಕೆ ತನ್ನದೇ ಆದ ಇತಿ ಮಿತಿ ಇರುತ್ತದೆ.ಅದನ್ನು ಮೀರಿ ಹೆಚ್ಚಿನ ಅಧಿಕಾರ ಚಲಾಯಿಸಲು ಆಗುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವಿಶಾಖ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯ ತಡೆಯಲು ಸುಪ್ರೀಂಕೋರ್ಟ್‌ ಮಾರ್ಗಸೂಚಿಯನ್ನು ನೀಡಿತ್ತು. ಎಲ್ಲ ಹಂತಗಳಲ್ಲೂ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು. ದೂರು ಬಂದಾಗ ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.