ADVERTISEMENT

ಇದ್ರೀಷ್ ಪಾಷ ಹತ್ಯೆ: ರಾಜಸ್ಥಾನದಲ್ಲಿ ಪುನೀತ್ ಕೆರೆಹಳ್ಳಿ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 11:12 IST
Last Updated 5 ಏಪ್ರಿಲ್ 2023, 11:12 IST
   

ರಾಮನಗರ: ಇದ್ರೀಷ್ ಪಾಷ ಹತ್ಯೆ ಪ್ರಕರಣದ ಆರೋಪಿಗಳಾದ ಪುನೀತ್ ಕೆರೆಹಳ್ಳಿ ಹಾಗೂ ಅವರ ನಾಲ್ವರು ಸಹಚರರನ್ನು ರಾಮನಗರ ಪೊಲೀಸರು ರಾಜಸ್ಥಾನದ ಬನಸ್ವಾರ ಬಳಿ ಬುಧವಾರ ಬಂಧಿಸಿದ್ದಾರೆ.

ಗುಜರಾತ್, ರಾಜಸ್ಥಾನ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಿ ಕರೆತರಲಾಗುತ್ತಿದೆ ಎಂದು ರಾಮನಗರ ಎಸ್.ಪಿ. ಕಾರ್ತೀಕ್ ರೆಡ್ಡಿ ಬುಧವಾರ ಮಾಹಿತಿ ನೀಡಿದರು.

ಬಂಧಿತರನ್ನು ಬನಸ್ವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಟ್ರಾನ್ಸಿಟ್ ಕಸ್ಟಡಿಗೆ ಪಡೆಯಲಿದ್ದೇವೆ ಎಂದರು.

ADVERTISEMENT

ಹುಬ್ಬಳ್ಳಿ- ಬೆಳಗಾವಿ, ಮಹಾರಾಷ್ಟ್ರ, ಗುಜರಾತ್‌ ಬಳಸಿ ಆರೋಪಿಗಳು ರಾಜಸ್ಥಾನ ತಲುಪಿದ್ದರು.

ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಗೋಪಿ, ಪವನ್ ಕುಮಾರ್, ಪಿಲ್ಲಿಂಗ್ ಅಂಬಿಗಾರ್, ಸುರೇಶ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ.

ಕೊಲೆ ಪ್ರಕರಣ ದಾಖಲಾಗುತ್ತಲೇ ಆರೋಪಿಗಳು ಕರ್ನಾಟಕದಿಂದ ಪರಾರಿ ಆಗಿದ್ದರು. ಆರೋಪಿಗಳನ್ನು ಬಂಧಿಸಲು ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಸದ್ಯ ಆರೋಪಿಗಳನ್ನು ಅಲ್ಲಿಂದ ಕರೆತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾರ್ಚ್ 31ರಂದು ಕನಕಪುರ ತಾಲ್ಲೂಕಿನ ಸಾತನೂರು ಪೊಲೀಸ್ ಠಾಣೆ ಬಳಿ ಆರೋಪಿಗಳು ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನು ತಡೆದಿದ್ದರು. ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಏ.‌1ರಂದು ಬೆಳಿಗ್ಗೆ 8ರ ಸುಮಾರಿಗೆ ಘಟನೆ ನಡೆದ ನೂರು ಮೀಟರ್ ನಷ್ಟು ದೂರದಲ್ಲಿ ಇದ್ರೀಷ್ ಪಾಷ ಅವರ ಶವ ಪತ್ತೆಯಾಗಿತ್ತು. ಪುನೀತ್ ಮತ್ತು ಅವರ ಗೆಳೆಯರು ಹಲ್ಲೆ ನಡೆಸಿ ಇದ್ರೀಷ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಯುನುಸ್ ಪಾಷ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 304 ಅಡಿ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.