ADVERTISEMENT

ಮೈತ್ರಿ ಸರ್ಕಾರ ಪತನವಾದರೆ ಬಿಎಸ್‌ವೈ ಮುಖ್ಯಮಂತ್ರಿ: ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:33 IST
Last Updated 14 ಏಪ್ರಿಲ್ 2019, 20:33 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ‘ಮೈತ್ರಿ’ ಸರ್ಕಾರ ಉರುಳಲಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಬಿಎಸ್‌ವೈ ಮುಖ್ಯಮಂತ್ರಿಯಾದರೆ ಸಹಜವಾಗಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಲಾಗುತ್ತದೆ. ನಮ್ಮ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ನಿಯಮವಿದೆ ಎಂದು ಅವರು ಬೆಂಗಳೂರು ಪ್ರೆಸ್‌ಕ್ಲಬ್‌ ಆಯೋಜಿಸಿದ್ದ ಮಾತು–ಮಂಥನ ಸಂವಾದದಲ್ಲಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಮತ ಚಲಾವಣೆ ಮಾಡಿ ಎಂದು ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿರುವುದರ ಅರ್ಥವೆಂದರೆ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಷ್ಟು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಏರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಅವಕಾಶ ಹೆಚ್ಚುತ್ತದೆ ಎಂದರು.

ADVERTISEMENT

ಮೈತ್ರಿ ಪಕ್ಷದಲ್ಲಿನ ಗೊಂದಲ, ಅಪನಂಬಿಕೆ ಮತ್ತು ಕಿತ್ತಾಟದ ಪರಿಣಾಮ ಸರ್ಕಾರ ಪತನವಾಗುತ್ತದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲುತ್ತದೆ. ಇಡೀ ದೇಶದಲ್ಲಿ ಮೋದಿ ಅಲೆ ಇರುವಂತೆ ರಾಜ್ಯದಲ್ಲೂ ಮೋದಿ ಅಲೆ ಇದೆ ಎಂದರು.

ಡಿಎನ್‌ಎ ಪದ ಕಠೋರ: ಪಕ್ಷದಲ್ಲಿ ಡಿಎನ್‌ಎ ಮತ್ತು ಜೀನ್‌ ಕಾರಣಕ್ಕೆ ಟಿಕೆಟ್‌ ನೀಡುವುದಿಲ್ಲ ಎಂದು ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಹೇಳಿಕೆಯ ಪದ ಬಳಕೆ ಕಠೋರವಾಯಿತು ಎಂಬ ಅಭಿಪ್ರಾಯ ಪಕ್ಷದಲ್ಲಿದೆ ಎಂದೂ ಅವರು ಹೇಳಿದರು.

ಸುಮಲತಾ ಅವಿರೋಧ ಆಯ್ಕೆ ಆಗಬೇಕಿತ್ತು
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿ ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತು ಎಂದು ಅರವಿಂದ ಲಿಂಬಾವಳಿ ಹೇಳಿದರು.

ದಿವಂಗತ ಅಂಬರೀಷ್‌ ಮತ್ತು ಅವರ ಪತ್ನಿ ಸುಮಲತಾ ಅವರು ಸಾಂಸ್ಕೃತಿಕವಾಗಿ ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ, ಅಂಬರೀಷ್‌ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಇದ್ದರು. ಆ ಎರಡೂ ಪಕ್ಷಗಳು ಸುಮಲತಾ ಅವರ ಕೈ ಬಿಟ್ಟಿರುವುದರಿಂದ ಅಂಬರೀಷ್‌ ಅವರ ಮನೆತನಕ್ಕೆ ಗೌರವ ನೀಡಿ ಬೆಂಬಲ ಸೂಚಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.